unfoldingWord 35 - ಕನಿಕರವುಳ್ಳ ತಂದೆಯ ಕಥೆ
概要: Luke 15
文本编号: 1235
语言: Kannada
听众: General
目的: Evangelism; Teaching
Features: Bible Stories; Paraphrase Scripture
状态: Approved
脚本是翻译和录制成其他语言的基本指南,它们需要根据实际需要而进行调整以适合不同的文化和语言。某些使用术语和概念可能需要有更多的解释,甚至要完全更换或省略。
文本正文
ಒಂದಾನೊಂದು ದಿನ, ಯೇಸು ತನ್ನ ಮಾತನ್ನು ಕೇಳಲು ಕೂಡಿಬಂದಿದ್ದ ಅನೇಕ ಜನರಿಗೆ ಬೋಧಿಸುತ್ತಿದ್ದನು. ಈ ಜನರು ತೆರಿಗೆ ವಸೂಲಿಗಾರರು ಮತ್ತು ಮೋಶೆಯ ಧರ್ಮಶಾಸ್ತ್ರವನ್ನು ಅನುಸರಿಸಲು ಪ್ರಯತ್ನಿಸದ ಇತರ ಜನರಾಗಿದ್ದರು.
ಕೆಲವು ಮಂದಿ ಧಾರ್ಮಿಕ ನಾಯಕರು ಯೇಸು ಈ ಜನರೊಂದಿಗೆ ಸ್ನೇಹಿತನಂತೆ ಮಾತಾಡುತ್ತಿರುವುದನ್ನು ಕಂಡರು. ಆದ್ದರಿಂದ ಅವರು ಪರಸ್ಪರ ಒಬ್ಬರಿಗೊಬ್ಬರು ಆತನು ತಪ್ಪು ಮಾಡುತ್ತಿದ್ದಾನೆ ಎಂದು ಹೇಳಲು ಪ್ರಾರಂಭಿಸಿದರು. ಯೇಸು ಅವರು ಮಾತನಾಡುವುದನ್ನು ಕೇಳಿಸಿಕೊಂಡನು, ಆದ್ದರಿಂದ ಆತನು ಈ ಕಥೆಯನ್ನು ಅವರಿಗೆ ಹೇಳಿದನು.
"ಒಬ್ಬ ಮನುಷ್ಯನಿಗೆ ಇಬ್ಬರು ಮಕ್ಕಳಿದ್ದರು, ಕಿರಿಯ ಮಗನು ತನ್ನ ತಂದೆಗೆ, 'ತಂದೆಯೇ, ನನಗೆ ನನ್ನ ಸ್ವಾಸ್ತ್ಯ ಬೇಕು!' ಎಂದು ಕೇಳಿದನು. ಆದ್ದರಿಂದ ತಂದೆಯು ತನ್ನ ಇಬ್ಬರು ಮಕ್ಕಳಿಗೂ ಆಸ್ತಿಯನ್ನು ಹಂಚಿಕೊಟ್ಟನು."
"ತರುವಾಯ ಕಿರಿಯ ಮಗನು ತನಗಿದ್ದದ್ದನ್ನೆಲ್ಲಾ ಕೂಡಿಸಿಕೊಂಡು ದೂರಕ್ಕೆ ಹೋಗಿ ಪಾಪಮಯವಾದ ಜೀವನ ನಡೆಸಿ ತನ್ನ ಹಣವನ್ನು ಹಾಳುಮಾಡಿಕೊಂಡನು."
"ಅನಂತರ, ಕಿರಿಯ ಮಗನಿದ್ದ ದೇಶದಲ್ಲಿ ಘೋರವಾದ ಬರ ಉಂಟಾಯಿತು ಮತ್ತು ಆಹಾರವನ್ನು ಕೊಂಡುಕೊಳ್ಳಲು ಅವನ ಬಳಿ ಹಣವಿರಲಿಲ್ಲ. ಅವನು ತನಗೆ ಸಿಕ್ಕಿದಂಥ ಕೆಲಸವನ್ನು ಅಂದರೆ ಹಂದಿಗಳನ್ನು ಮೇಯಿಸುವ ಕೆಲಸವನ್ನು ಮಾಡಿದನು. ಅವನು ತುಂಬಾ ನಿರ್ಗತಿಕನು ಮತ್ತು ಹಸಿದವನು ಆಗಿದ್ದನು, ಆದ್ದರಿಂದ ಹಂದಿಗಳ ಆಹಾರವನ್ನು ತಿನ್ನಲು ಬಯಸಿದನು."
"ಅಂತಿಮವಾಗಿ ಕಿರಿಯ ಮಗನು ತನ್ನೊಳಗೆ ತಾನು, 'ನಾನು ಏನು ಮಾಡುತ್ತಿದ್ದೇನೆ? ನನ್ನ ತಂದೆಯ ಸೇವಕರೆಲ್ಲರಿಗೆ ತಿನ್ನಲು ಬೇಕಾಕಷ್ಟು ಇದೆ, ಆದರೆ ನಾನು ಇಲ್ಲಿ ಹಸಿವಿನಿಂದಿದ್ದೇನೆ, ನಾನು ನನ್ನ ತಂದೆಯ ಬಳಿಗೆ ಹಿಂದಿರುಗಿ ಹೋಗಿ ನನ್ನನ್ನು ಅವನ ಸೇವಕರಲ್ಲಿ ಒಬ್ಬನಂತೆ ಮಾಡು ಎಂದು ಬೇಡಿಕೊಳ್ಳುವೆನು' ಅಂದುಕೊಂಡನು”
"ಆದ್ದರಿಂದ ಕಿರಿಯ ಮಗನು ತನ್ನ ತಂದೆಯ ಮನೆಯ ಕಡೆಗೆ ಹಿಂದಿರುಗಿ ಹೋಗಲು ಪ್ರಾರಂಭಿಸಿದನು. ಅವರು ಇನ್ನೂ ದೂರದಲ್ಲಿರುವಾಗಲೇ ಅವನ ತಂದೆಯು ಅವನನ್ನು ನೋಡಿ ಅವನಿಗಾಗಿ ಕನಿಕರಪಟ್ಟನು. ಅವನು ತನ್ನ ಮಗನ ಬಳಿಗೆ ಓಡಿಹೋಗಿ ಅವನನ್ನು ಅಪ್ಪಿಕೊಂಡು ಮುದ್ದಿಟ್ಟನು."
"ಮಗನು ಅವನಿಗೆ, ‘ಅಪ್ಪಾ, ನಾನು ದೇವರಿಗೆ ವಿರೋಧವಾಗಿಯೂ ನಿನಗೆ ವಿರೋಧವಾಗಿಯೂ ಪಾಪ ಮಾಡಿದ್ದೇನೆ. ನಾನು ನಿನ್ನ ಮಗನೆನಿಸಿಕೊಳ್ಳುವುದಕ್ಕೆ ಯೋಗ್ಯನಲ್ಲ’ ಎಂದು ಹೇಳಿದನು".
"ಆದರೆ ಅವನ ತಂದೆಯು ತನ್ನ ಆಳುಗಳಲ್ಲಿ ಒಬ್ಬನಿಗೆ, ‘ಬೇಗ ಹೋಗಿ ಅತ್ಯುತ್ತಮವಾದ ಉಡುಪನ್ನು ತಟ್ಟನೆ ತಂದು ನನ್ನ ಮಗನಿಗೆ ಉಡಿಸಿರಿ! ಇವನ ಬೆರಳಿಗೆ ಉಂಗುರವನ್ನು ತೊಡಿಸಿರಿ, ಕಾಲಿಗೆ ಪಾದರಕ್ಷೆಯನ್ನು ಮೆಡಿಸಿರಿ. ಉತ್ತಮವಾದ ಕರುವನ್ನು ತಂದು ಕೊಯ್ಯಿರಿ, ಹಬ್ಬಮಾಡೋಣ, ಉಲ್ಲಾಸಪಡೋಣ. ನನ್ನ ಮಗನು ಸತ್ತವನಾಗಿದ್ದನು, ಈಗ ಬದುಕಿ ಬಂದಿದ್ದಾನೆ! ತಪ್ಪಿಹೋಗಿದ್ದನು, ಈಗ ನಮಗೆ ಸಿಕ್ಕಿದ್ದಾನೆ!"
"ಆದ್ದರಿಂದ ಜನರು ಸಂಭ್ರಮಿಸುವುದಕ್ಕೆ ತೊಡಗಿದರು. ಒಡನೆಯೇ, ಹಿರಿಯ ಮಗನು ಹೊಲದ ಕೆಲಸವನ್ನು ಮುಗಿಸಿಕೊಂಡು ಮನೆಗೆ ಬಂದನು. ಅವನು ವಾದ್ಯಘೋಷಗಳನ್ನೂ ನರ್ತನಗಳನ್ನು ಕೇಳಿ, ಏನಾಗುತ್ತಿದೆ ಎಂದು ಆಶ್ಚರ್ಯಪಟ್ಟನು."
"ತನ್ನ ಸಹೋದರನು ಮನೆಗೆ ಬಂದ ಕಾರಣ ಅವರು ಸಂಭ್ರಮಿಸುತ್ತಿದ್ದಾರೆಂದು ಹಿರಿಯ ಮಗನಿಗೆ ತಿಳಿದುಬಂದಾಗ, ಅವನು ತುಂಬಾ ಕೋಪಗೊಂಡನು ಮತ್ತು ಮನೆಯೊಳಕ್ಕೆ ಹೋಗಲಿಲ್ಲ. ಅವನ ತಂದೆಯು ಹೊರಗೆ ಬಂದು, ಬಾ ಅವರೊಂದಿಗೆ ಸಂಭ್ರಮಿಸು ಎಂದು ಅವನನ್ನು ಬೇಡಿಕೊಂಡನು, ಆದರೆ ಅವನು ನಿರಾಕರಿಸಿದನು."
"ಹಿರಿಯ ಮಗನು ತನ್ನ ತಂದೆಗೆ, 'ಇಷ್ಟು ವರ್ಷಗಳು ನಾನು ನಿಷ್ಠೆಯಿಂದ ಕೆಲಸ ಮಾಡಿದ್ದೇನೆ! ನಾನು ನಿನಗೆ ಅವಿಧೇಯನಾಗಲಿಲ್ಲ. ಆದರೂ ನಾನು ನನ್ನ ಸ್ನೇಹಿತರ ಸಂಗಡ ಉಲ್ಲಾಸಪಡುವುದಕ್ಕಾಗಿ ನೀನು ಎಂದೂ ನನಗೆ ಒಂದು ಆಡನ್ನಾದರೂ ಕೊಡಲಿಲ್ಲ. ಆದರೆ ಈ ನಿನ್ನ ಮಗನು ಪಾಪದ ಕೃತ್ಯಗಳನ್ನು ಮಾಡಿ ನಿನ್ನ ಹಣವನ್ನು ಹಾಳುಮಾಡಿದನು. ಅವನು ಬಂದಾಗ ಉಲ್ಲಾಸಪಡುವುದಕ್ಕಾಗಿ ನೀನು ಅವನಿಗಾಗಿ ಅತ್ಯುತ್ತಮ ಕರುವನ್ನು ಕೊಯ್ಸಿದಿಯಲ್ಲಾ!' ಎಂದು ಹೇಳಿದನು."
"ತಂದೆಯು, ‘ನನ್ನ ಕಂದಾ, ನೀನು ಯಾವಾಗಲೂ ನನ್ನ ಸಂಗಡ ಇದ್ದೀ ಮತ್ತು ನನ್ನದೆಲ್ಲಾ ನಿನ್ನದೇ. ಆದರೆ ಉಲ್ಲಾಸಪಡುವುದೂ ನ್ಯಾಯವಾದದ್ದೇ, ಏಕೆಂದರೆ ಈ ನಿನ್ನ ತಮ್ಮ ಸತ್ತವನಾಗಿದ್ದನು, ಈಗ ಬದುಕಿ ಬಂದಿದ್ದಾನೆ, ಅವನು ತಪ್ಪಿಹೋಗಿದ್ದನು, ಈಗ ಸಿಕ್ಕಿದ್ದಾನೆ!' ಎಂದು ಹೇಳಿದನು"