unfoldingWord 01 - ಸೃಷ್ಠಿ
概要: Genesis 1-2
文本编号: 1201
语言: Kannada
主题: Bible timeline (Creation)
听众: General
目的: Evangelism; Teaching
Features: Bible Stories; Paraphrase Scripture
状态: Approved
脚本是翻译和录制成其他语言的基本指南,它们需要根据实际需要而进行调整以适合不同的文化和语言。某些使用术语和概念可能需要有更多的解释,甚至要完全更换或省略。
文本正文
ದೇವರು ಆದಿಯಲ್ಲಿ ಎಲ್ಲವನ್ನೂ ಹೀಗೆ ಉಂಟುಮಾಡಿದನು. ಆತನು ಆರು ದಿನಗಳಲ್ಲಿ ಈ ವಿಶ್ವವನ್ನು ಮತ್ತು ಅದರಲ್ಲಿರುವುದೆಲ್ಲವನ್ನು ಸೃಷ್ಟಿಸಿದನು. ದೇವರು ಭೂಮಿಯನ್ನು ಸೃಷ್ಟಿಸಿದ ನಂತರ ಅದು ಕತ್ತಲಾಗಿಯೂ ಮತ್ತು ಬರಿದಾಗಿಯೂ ಇತ್ತು, ಏಕೆಂದರೆ ಆತನು ಇನ್ನೂ ಅದರಲ್ಲಿ ಯಾವುದನ್ನೂ ರೂಪಿಸಿರಲಿಲ್ಲ. ಆದರೆ ದೇವರ ಆತ್ಮವು ಜಲಸಮೂಹದ ಮೇಲೆ ಸಂಚರಿಸುತ್ತಿತ್ತು
ಅನಂತರ ದೇವರು “ಬೆಳಕಾಗಲಿ” ಎಂದು ಆಜ್ಞಾಪಿಸಲು ಬೆಳಕಾಯಿತು. ದೇವರು ಆ ಬೆಳಕನ್ನು ಒಳ್ಳೆಯದೆಂದು ಕಂಡನು. ದೇವರು ಬೆಳಕನ್ನೂ ಕತ್ತಲನ್ನೂ ಬೇರ್ಪಡಿಸಿ ಬೆಳಕಿಗೆ “ಹಗಲು” ಎಂದೂ, ಕತ್ತಲೆಗೆ “ಇರುಳು” ಎಂದೂ ಹೆಸರಿಟ್ಟನು. ಸೃಷ್ಟಿಯ ಮೊದಲನೆಯ ದಿನದಲ್ಲಿ ದೇವರು ಬೆಳಕನ್ನು ಸೃಷ್ಟಿಸಿದನು.
ಸೃಷ್ಟಿಯ ಎರಡನೆಯ ದಿನದಲ್ಲಿ, ದೇವರು: “ಜಲರಾಶಿಗಳ ಮೇಲೆ ಗುಮ್ಮಟವು ಉಂಟಾಗಲಿ” ಎನ್ನಲು ಗುಮ್ಮಟವು ಉಂಟಾಯಿತ್ತು. ದೇವರು ಆ ಗುಮ್ಮಟಕ್ಕೆ “ಆಕಾಶ” ಎಂದು ಹೆಸರಿಟ್ಟನು.
ಮೂರನೆಯ ದಿನದಲ್ಲಿ, ದೇವರು: “ಆಕಾಶದ ಕೆಳಗಿರುವ ನೀರೆಲ್ಲಾ ಒಂದೇ ಸ್ಥಳದಲ್ಲಿ ಒಟ್ಟಿಗೆ ಕೂಡಿಕೊಳ್ಳಲಿ ಮತ್ತು ಒಣನೆಲವು ಕಾಣಿಸಲಿ” ಅಂದನು. ದೇವರು ಒಣನೆಲಕ್ಕೆ “ಭೂಮಿ” ಎಂದೂ ಜಲರಾಶಿಗೆ “ಸಮುದ್ರ” ಎಂದೂ ಹೆಸರಿಟ್ಟನು. ದೇವರು ತಾನು ಸೃಷ್ಟಿಸಿರುವುಗಳನ್ನು ಒಳ್ಳೆಯದೆಂದು ಕಂಡನು.
ತರುವಾಯ ದೇವರು, “ಭೂಮಿಯು ಸಕಲವಿಧವಾದ ಮರಗಳನ್ನು ಮತ್ತು ಸಸ್ಯಗಳನ್ನೂ ಬೆಳೆಯಿಸಲಿ” ಎಂದು ಹೇಳಿದನು, ಹಾಗೆಯೇ ಆಯಿತು. ದೇವರು ತಾನು ಸೃಷ್ಟಿಸಿರುವುದನ್ನು ಒಳ್ಳೆಯದೆಂದು ಕಂಡನು.
ಸೃಷ್ಟಿಯ ನಾಲ್ಕನೆಯ ದಿನದಲ್ಲಿ, ದೇವರು: “ಆಕಾಶ ಮಂಡಲದಲ್ಲಿ ಬೆಳಕುಗಳು ಉಂಟಾಗಲಿ” ಅಂದನು, ಸೂರ್ಯ, ಚಂದ್ರ ಮತ್ತು ನಕ್ಷತ್ರಗಳು ಉಂಟಾದವು. ಭೂಮಿಯ ಮೇಲೆ ಬೆಳಕು ಕೊಡುವುದಕ್ಕೆ ಮತ್ತು ಹಗಲಿರುಳುಗಳನ್ನು ಹಾಗೂ ಕಾಲಗಳನ್ನೂ, ದಿನಸಂವತ್ಸರಗಳನ್ನೂ ಸೂಚಿಸುವ ಗುರುತುಗಳಾಗಿರುವುದಕ್ಕೆ ದೇವರು ಅವುಗಳನ್ನು ಉಂಟುಮಾಡಿದನು. ದೇವರು ತಾನು ಸೃಷ್ಟಿಸಿರುವುದನ್ನು ಒಳ್ಳೆಯದೆಂದು ಕಂಡನು.
ಐದನೆಯ ದಿನದಲ್ಲಿ, ದೇವರು: “ಜಲಜಂತುಗಳು ನೀರಿನಲ್ಲಿ ತುಂಬಿಕೊಳ್ಳಲಿ ಮತ್ತು ಪಕ್ಷಿಗಳು ಅಂತರಿಕ್ಷದಲ್ಲಿ ಹಾರಾಡಲಿ” ಅಂದನು. ಹೀಗೆ ದೇವರು ನೀರಿನಲ್ಲಿ ತುಂಬಿರುವ ಸಕಲವಿಧವಾದ ಜೀವಿಗಳನ್ನೂ ಮತ್ತು ಸಕಲವಿಧವಾದ ಪಕ್ಷಿಗಳನ್ನೂ ಉಂಟುಮಾಡಿದನು. ದೇವರು ಅದನ್ನು ಒಳ್ಳೆಯದೆಂದು ಕಂಡನು, ಮತ್ತು ಅವುಗಳನ್ನು ಆಶೀರ್ವದಿಸಿದನು.
ಸೃಷ್ಟಿಯ ಆರನೆಯ ದಿನದಲ್ಲಿ, ದೇವರು: “ಭೂಮಿಯ ಮೇಲೆ ಸಕಲವಿಧವಾದ ಪ್ರಾಣಿಗಳು ಉಂಟಾಗಲಿ” ಅಂದನು! ದೇವರು ಹೇಳಿದಂತೆಯೇ ಎಲ್ಲವು ಉಂಟಾಯಿತು. ಅದರಲ್ಲಿ ಕೆಲವು ಸಾಕುಪ್ರಾಣಿಗಳು, ಕೆಲವು ನೆಲದ ಮೇಲೆ ಹರಿದಾಡುವ ಪ್ರಾಣಿಗಳು ಇನ್ನು ಕೆಲವು ಕಾಡುಮೃಗಗಳು ಇದ್ದವು. ದೇವರು ಅವುಗಳನ್ನು ಒಳ್ಳೆಯದೆಂದು ಕಂಡನು.
ಆಮೇಲೆ ದೇವರು, “ನಮ್ಮ ಸ್ವರೂಪದಲ್ಲಿ ನಮ್ಮ ಹೋಲಿಕೆಗೆ ಸರಿಯಾಗಿ ಮನುಷ್ಯರನ್ನು ಉಂಟು ಮಾಡೋಣ, ಅವರು ಭೂಮಿಯ ಮೇಲೆಯೂ ಮತ್ತು ಪ್ರಾಣಿಗಳ ಮೇಲೆಯೂ ದೊರೆತನಮಾಡಲಿ” ಅಂದನು.
ಆದ್ದರಿಂದ ದೇವರು ನೆಲದ ಮಣ್ಣನ್ನು ತೆಗೆದುಕೊಂಡು ಮನುಷ್ಯನನ್ನು ರೂಪಿಸಿದನು ಮತ್ತು ಅವನಲ್ಲಿ ಜೀವಶ್ವಾಸವನ್ನು ಊದಿದನು. ಆ ಮನುಷ್ಯನ ಹೆಸರು ಆದಾಮನು. ದೇವರು ಅಲ್ಲಿ ಒಂದು ದೊಡ್ಡ ಉದ್ಯಾನವನವನ್ನು ಸೃಷ್ಟಿಸಿ ಅದರಲ್ಲಿ ಆದಾಮನು ತಂಗುವಂತೆ ಮಾಡಿದನು ಮತ್ತು ಅದನ್ನು ನೋಡಿಕೊಳ್ಳುವುದಕ್ಕಾಗಿ ಅವನನ್ನು ಅದರಲ್ಲಿ ಇರಿಸಿದನು.
ಉದ್ಯಾನವನದ ಮಧ್ಯದಲ್ಲಿ ದೇವರು ಎರಡು ವಿಶೇಷವಾದ ಮರಗಳನ್ನು ಬೆಳೆಯಿಸಿದನು - ಜೀವದಾಯಕ ವೃಕ್ಷ ಮತ್ತು ಒಳ್ಳೇಯದರ ಕೆಟ್ಟದ್ದರ ಅರಿವನ್ನು ಹುಟ್ಟಿಸುವ ವೃಕ್ಷ. ಒಳ್ಳೇಯದರ ಕೆಟ್ಟದ್ದರ ಅರಿವನ್ನು ಹುಟ್ಟಿಸುವ ಮರದ ಹಣ್ಣನ್ನು ಹೊರತುಪಡಿಸಿ ತೋಟದಲ್ಲಿರುವ ಎಲ್ಲಾ ಮರಗಳ ಹಣ್ಣನ್ನು ತಿನ್ನಬಹುದೆಂದು ಒಂದು ವೇಳೆಅವನು ಆ ಮರದ ಹಣ್ಣನ್ನು ತಿಂದರೆ, ಅವನು ಸತ್ತುಹೋಗುವನು.ಎಂದು ದೇವರು ಹೇಳಿದನು
ಅನಂತರ ದೇವರು, “ಮನುಷ್ಯನು ಒಂಟಿಯಾಗಿರುವುದು ಒಳ್ಳೆಯದಲ್ಲ” ಅಂದನು. ಯಾವ ಪ್ರಾಣಿಯು ಆದಾಮನಿಗೆ ಸಹಕಾರಿಯಾಗಿ ಕಂಡುಬರಲಿಲ್ಲ.
ಹೀಗಿರುವಲ್ಲಿ ದೇವರು ಆದಾಮನಿಗೆ ಗಾಢನಿದ್ರೆಯನ್ನು ಬರಮಾಡಿ, ಅವನ ಪಕ್ಕೆಯ ಎಲುಬುಗಳಲ್ಲಿ ಒಂದನ್ನು ತೆಗೆದುಕೊಂಡು ಅದನ್ನು ಸ್ತ್ರೀಯನ್ನಾಗಿ ಮಾಡಿ ಆಕೆಯನ್ನು ಅವನ ಬಳಿಗೆ ಕರೆದುಕೊಂಡು ಬಂದನು.
ಆದಾಮನು ಆಕೆಯನ್ನು ನೋಡಿದಾಗ, ಅವನು, "ಈಗ ಸರಿ! ಈಕೆಯು ನನ್ನಂತೆಯೇ ಇದ್ದಾಳೆ! ಈಕೆಯು ಮನುಷ್ಯನಿಂದ ಉತ್ಪತ್ತಿಯಾದ ಕಾರಣ ನಾರೀ ಎನ್ನಿಸಿಕೊಳ್ಳಲಿ” ಅಂದನು. ಈ ಕಾರಣದಿಂದ ಪುರುಷನು ತಂದೆತಾಯಿಗಳನ್ನು ಬಿಟ್ಟು ತನ್ನ ಹೆಂಡತಿಯೊಂದಿಗೆ ಒಂದಾಗುವನು.
ದೇವರು ತನ್ನ ಸ್ವರೂಪದಲ್ಲಿ ಪುರುಷನನ್ನು ಮತ್ತು ಸ್ತ್ರೀಯನ್ನು ಉಂಟುಮಾಡಿದನು. ಆತನು ಅವರನ್ನು ಆಶೀರ್ವದಿಸಿ ಅವರಿಗೆ, "ನೀವು ಅನೇಕ ಮಕ್ಕಳು ಮತ್ತು ಮೊಮ್ಮಕ್ಕಳನ್ನು ಪಡೆದು ಭೂಮಿಯನ್ನು ತುಂಬಿಕೊಳ್ಳಿರಿ!" ಎಂದು ಹೇಳಿದನು. ದೇವರು ತಾನು ಉಂಟುಮಾಡಿದ್ದೆಲ್ಲವುಗಳನ್ನು ಬಹಳ ಒಳ್ಳೆಯದೆಂದು ಕಂಡನು, ಮತ್ತು ಆತನು ಅವೆಲ್ಲವುಗಳನ್ನು ಬಹು ಇಷ್ಟಪಟ್ಟನು. ಇವೆಲ್ಲವುಗಳು ಸೃಷ್ಟಿಯ ಆರನೆಯ ದಿನದಲ್ಲಿ ಸಂಭವಿಸಿದವು.
ಏಳನೇಯ ದಿನ ಬಂದಾಗ, ದೇವರು ತಾನು ಮಾಡುತ್ತಿದ್ದ ಎಲ್ಲಾ ಕೆಲಸವನ್ನು ಪೂರ್ಣಗೊಳಿಸಿದನು. ಆತನು ಏಳನೇ ದಿನವನ್ನು ಪರಿಶುದ್ಧ ದಿನವಾಗಿರಲಿ ಎಂದು ಆಶೀರ್ವದಿಸಿದನು, ಏಕೆಂದರೆ ಆ ದಿನದಲ್ಲಿ ಆತನು ಸೃಷ್ಟಿಕಾರ್ಯವನ್ನು ಮುಗಿಸಿಬಿಟ್ಟನು. ಹೀಗೆ ದೇವರು ಈ ವಿಶ್ವವನ್ನು ಮತ್ತು ಅದರಲ್ಲಿರುವ ಸಮಸ್ತವನ್ನು ಸೃಷ್ಟಿಸಿದನು.