unfoldingWord 42 - ಯೇಸು ಪರಲೋಕಕ್ಕೆ ಹಿಂದಿರುಗಿ ಹೋದನು
เค้าโครง: Matthew 28:16-20; Mark 16:12-20; Luke 24:13-53; John 20:19-23; Acts 1:1-11
รหัสบทความ: 1242
ภาษา: Kannada
ผู้ฟัง: General
เป้าหมายของสื่อบันทึกเสียง: Evangelism; Teaching
Features: Bible Stories; Paraphrase Scripture
สถานะ: Approved
บทความเป็นแนวทางพื้นฐานสำหรับการแปลและบันทึกเสียงภาษาอื่นๆ ควรดัดแปลงตามความจำเป็นเพื่อให้เข้าใจและเหมาะสมกับวัฒนธรรมและภาษาแต่ละภาษา คำศัพท์และแนวคิดบางคำที่ใช้อาจต้องอธิบายเพิ่มเติม หรือแทนที่ หรือตัดออก
เนื้อหาบทความ
ದೇವರು ಯೇಸುವನ್ನು ಸತ್ತವರೊಳಗಿಂದ ಎಬ್ಬಿಸಿದ ದಿನದಲ್ಲಿ, ಆತನ ಶಿಷ್ಯರಲ್ಲಿ ಇಬ್ಬರು ಸಮೀಪದ ಊರಿಗೆ ಹೋಗುತ್ತಿದ್ದರು. ಅವರು ನಡೆದುಕೊಂಡು ಹೋಗುತ್ತಿರುವಾಗ ಯೇಸುವಿಗೆ ಸಂಭವಿಸಿದ್ದ ಕಾರ್ಯಗಳ ಕುರಿತು ಅವರು ಮಾತನಾಡುತ್ತಿದ್ದರು. ಆತನೇ ಮೆಸ್ಸೀಯನೆಂದು ಅವರು ನಿರೀಕ್ಷಿಸಿಕೊಂಡಿದ್ದರು, ಆದರೆ ಆತನು ಕೊಲ್ಲಲ್ಪಟ್ಟನು. ಆದರೆ ಈಗ ಆ ಸ್ತ್ರೀಯರು ಆತನು ಮತ್ತೆ ಬದುಕಿಬಂದಿದ್ದಾನೆಂದು ಹೇಳಿದರು. ಯಾವುದನ್ನು ನಂಬಬೇಕೆಂದು ಅವರಿಗೆ ತಿಳಿದಿರಲಿಲ್ಲ.
ಯೇಸು ಅವರ ಹತ್ತಿರಕ್ಕೆ ಬಂದು ಅವರ ಜೊತೆಯಲ್ಲಿ ನಡೆಯಲು ಆರಂಭಿಸಿದನು, ಆದರೆ ಅವರು ಅವನನ್ನು ಗುರುತನ್ನು ಹಿಡಿಯಲಿಲ್ಲ. ಅವರು ಮಾತನಾಡುತ್ತಿರುವ ಸಂಗತಿಗಳು ಏನೆಂದು ಆತನು ಕೇಳಿದನು. ಹಿಂದಿನ ಕೆಲವು ದಿನಗಳಲ್ಲಿ ಯೇಸುವಿಗೆ ಸಂಭವಿಸಿದ ಎಲ್ಲಾ ಸಂಗತಿಗಳ ಬಗ್ಗೆ ಅವರು ಆತನಿಗೆ ತಿಳಿಸಿದರು. ಯೆರೂಸಲೇಮಿನಲ್ಲಿ ನಡೆದದ್ದನ್ನು ತಿಳಿಯದಿರುವಂಥ ಪರಸ್ಥಳದವನೊಟ್ಟಿಗೆ ತಾವು ಮಾತನಾಡುತ್ತಿದ್ದೇವೆಂದು ಅವರು ಭಾವಿಸಿದರು.
ಅನಂತರ ಯೇಸು, ಮೆಸ್ಸೀಯನ ಕುರಿತು ದೇವರ ವಾಕ್ಯದಲ್ಲಿ ಹೇಳಿರುವಂಥದ್ದನ್ನು ಅವರಿಗೆ ವಿವರಿಸಿದನು. ದುಷ್ಟ ಮನುಷ್ಯರು ಮೆಸ್ಸೀಯನನ್ನು ಹಿಂಸಿಸಿ ಕೊಲ್ಲುತ್ತಾರೆ ಎಂದು ಪ್ರವಾದಿಗಳು ಬಹಳ ಕಾಲದ ಹಿಂದೆಯೇ ಹೇಳಿದ್ದರು ಅದರೊಂದಿಗೆ. ಪ್ರವಾದಿಗಳು ಆತನು ಮೂರನೆಯ ದಿನದಲ್ಲಿ ಮತ್ತೆ ಎದ್ದುಬರುತ್ತಾನೆ ಎಂದು ಸಹ ತಿಳಿಸಿದ್ದರು .
ಆ ಇಬ್ಬರು ಮನುಷ್ಯರು ಇಳಿದುಕೊಳ್ಳಲು ಬಯಸಿದಂಥ ಊರಿಗೆ ಅವರು ಬಂದಾಗ ಸಂಜೆಯಾಯಿತು. ಅವರು ತಮ್ಮೊಂದಿಗೆ ಇಳಿದುಕೊಳ್ಳುವಂತೆ ಯೇಸುವನ್ನು ಆಹ್ವಾನಿಸಿದರು, ಆದ್ದರಿಂದ ಆತನು ಅವರೊಂದಿಗೆ ಮನೆಗೆ ಹೋದನು. ಅವರು ತಮ್ಮ ರಾತ್ರಿ ಊಟವನ್ನು ಮಾಡಲು ಕುಳಿತುಕೊಂಡರು. ಯೇಸು ಒಂದು ರೊಟ್ಟಿಯನ್ನು ತೆಗೆದುಕೊಂಡು, ದೇವರ ಸ್ತೋತ್ರ ಮಾಡಿದ ನಂತರ ಅದನ್ನು ಮುರಿದನು. ಕೂಡಲೇ, ಅವರು ಆತನನ್ನು ಯೇಸು ಎಂದು ಗುರುತು ಹಿಡಿದರು. ಆದರೆ ಆ ಕ್ಷಣದಲ್ಲಿ, ಆತನು ಅವರ ದೃಷ್ಟಿಯಿಂದ ಮಾಯವಾದನು.
ಆ ಇಬ್ಬರು ಮನುಷ್ಯರು ಪರಸ್ಪರ ಒಬ್ಬರಿಗೊಬ್ಬರು, "ಆತನು ಯೇಸುವಾಗಿದ್ದನು! ಅದ್ದರಿಂದಲೇ ಆತನು ದೇವರ ವಾಕ್ಯವನ್ನು ನಮಗೆ ವಿವರಿಸಿ ಹೇಳಿದಾಗ ನಾವು ಉತ್ಸುಕರಾಗಿದ್ದೇವು!" ಎಂದು ಹೇಳಿದರು. ತಕ್ಷಣವೇ ಅವರು ಅಲ್ಲಿಂದ ಹೊರಟು ಯೆರೂಸಲೇಮಿಗೆ ಮರಳಿಬಂದರು. ಅವರು ಬಂದು ಶಿಷ್ಯರಿಗೆ, "ಯೇಸು ಜೀವಂತವಾಗಿದ್ದಾನೆ! ನಾವು ಅವನನ್ನು ನೋಡಿದೆವು!" ಎಂದು ಹೇಳಿದರು.
ಶಿಷ್ಯರು ಮಾತನಾಡುತ್ತಿರುವಾಗ, ಇದ್ದಕ್ಕಿದ್ದಂತೆ ಯೇಸು ಅವರಿದ್ದ ಕೋಣೆಯಲ್ಲಿ ಪ್ರತ್ಯಕ್ಷನಾದನು. ಆತನು, "ನಿಮಗೆ ಸಮಾಧಾನವಾಗಲಿ!" ಎಂದನು ಹೇಳಿದನು. ಆತನು ಭೂತವೆಂದು ಶಿಷ್ಯರು ಭಾವಿಸಿದರು, ಆದರೆ ಯೇಸು "ನೀವು ಯಾಕೆ ಭಯಪಡುತ್ತೀರಿ? ನಿಜವಾಗಿಯೂ ನಾನು ಯೇಸು, ನನ್ನ ಕೈ ಮತ್ತು ಕಾಲಗಳನ್ನು ನೋಡಿರಿ, ನನ್ನಗಿರುವಂತೆ ಭೂತಕ್ಕೆ ದೇಹವಿಲ್ಲ" ಎಂದು ಹೇಳಿದನು. ತಾನು ಭೂತವಲ್ಲ ಎಂದು ತೋರಿಸಲು, ಆತನು ತಿನ್ನತಕ್ಕ ಪದಾರ್ಥವೇನಾದರೂ ಇದ್ದರೆ ಕೊಡಿರಿ ಎಂದು ಕೇಳಿದನು. ಅವರು ಆತನಿಗೆ ಒಂದು ತುಂಡು ಮೀನನ್ನು ಕೊಟ್ಟರು ಮತ್ತು ಆತನು ಅದನ್ನು ತಿಂದನು.
ಯೇಸು, "ನನ್ನ ಬಗ್ಗೆ ದೇವರ ವಾಕ್ಯದಲ್ಲಿ ಹೇಳಿರುವಂಥದ್ದೆಲ್ಲವೂ ನೆರವೇರುತ್ತದೆ ಎಂದು ನಾನು ನಿಮಗೆ ಹೇಳಿರಲಿಲ್ಲವೇ" ಎಂದು ಹೇಳಿದನು. ಆಗ ಅವರು ದೇವರ ವಾಕ್ಯವನ್ನು ಚೆನ್ನಾಗಿ ಅರ್ಥಮಾಡಿಕೊಳ್ಳುವಂತೆ ಯೇಸು ಮಾಡಿದನು. ಆತನು, "ಮೆಸ್ಸೀಯನಾದ ನಾನು, ಕಷ್ಟ ಪಟ್ಟು, ಸತ್ತು ಮೂರನೆಯ ದಿನದಲ್ಲಿ ಜೀವಿತನಾಗಿ ಎದ್ದು ಬರುವನೆಂದು ಬಹಳ ಕಾಲದ ಹಿಂದೆಯೇ ಪ್ರವಾದಿಗಳು ಬರೆದಿದ್ದರು" ಎಂದು ಹೇಳಿದನು.
"ನನ್ನ ಶಿಷ್ಯರು ದೇವರ ಸಂದೇಶವನ್ನು ಸಾರುವರು. ಪಶ್ಚಾತ್ತಾಪ ಪಡಬೇಕೆಂದು ಅವರು ಪ್ರತಿಯೊಬ್ಬರಿಗೂ ಹೇಳುವರು. ಅವರು ಪಶ್ಚಾತ್ತಾಪ ಪಟ್ಟರೆ ದೇವರು ಅವರ ಪಾಪಗಳನ್ನು ಕ್ಷಮಿಸುವನು. ನನ್ನ ಶಿಷ್ಯರು ಪ್ರಾರಂಭವಾಗಿ ಈ ಸಂದೇಶವನ್ನು ಯೆರೂಸಲೇಮಿನಲ್ಲಿ ಸಾರುವರು. ಅನಂತರ ಅವರು ಎಲ್ಲಾ ಕಡೆಯಿರುವ ಜನಾಂಗಗಳ ಬಳಿಗೆ ಹೋಗಿ ಸಾರುವರು ಎಂದು ಸಹ ಪ್ರವಾದಿಗಳು ಬರೆದಿದ್ದಾರೆ. ನಾನು ಹೇಳಿದ್ದಂಥ, ಮಾಡಿದ್ದಂಥ ಮತ್ತು ನನಗೆ ಸಂಭವಿಸಿದ್ದಂಥ ಎಲ್ಲದರ ಬಗ್ಗೆ ನೀವು ಸಾಕ್ಷಿಗಳಾಗಿದ್ದೀರಿ."
ಮುಂದಿನ ನಲವತ್ತು ದಿನಗಳಲ್ಲಿ, ಯೇಸು ತನ್ನ ಶಿಷ್ಯರಿಗೆ ಹಲವಾರು ಬಾರಿ ಕಾಣಿಸಿಕೊಂಡನು. ಒಮ್ಮೆ ಆತನು ಒಂದೇ ಸಮಯದಲ್ಲಿ 500 ಕ್ಕಿಂತ ಹೆಚ್ಚು ಜನರಿಗೆ ಕಾಣಿಸಿಕೊಂಡನು! ಆತನು ತನ್ನ ಶಿಷ್ಯರಿಗೆ ತಾನು ಜೀವಂತನಾಗಿ ಎದ್ದು ಬಂದಿದ್ದೇನೆ ಎಂದು ಅನೇಕ ವಿಧಗಳಲ್ಲಿ ಸಾಬೀತು ಮಾಡಿದನು ಮತ್ತು ದೇವರ ರಾಜ್ಯದ ಕುರಿತು ಅವರಿಗೆ ಬೋಧಿಸಿದನು.
ಯೇಸು ತನ್ನ ಶಿಷ್ಯರಿಗೆ, "ಪರಲೋಕದಲ್ಲಿ ಮತ್ತು ಭೂಲೋಕದಲ್ಲಿ ಇರುವ ಎಲ್ಲರನ್ನು ಆಳುವ ಅಧಿಕಾರವನ್ನು ದೇವರು ನನಗೆ ಕೊಟ್ಟಿದ್ದಾನೆ. ಆದ್ದರಿಂದ ಎಲ್ಲಾ ಜನಾಂಗಗಳ ಬಳಿಗೆ ಹೋಗಿ ಅವರನ್ನು ಶಿಷ್ಯರನ್ನಾಗಿ ಮಾಡಿರಿ. ಅದನ್ನು ಮಾಡುವುದಕ್ಕಾಗಿ ಅವರನ್ನು ತಂದೆ, ಮಗ, ಮತ್ತು ಪವಿತ್ರಾತ್ಮನ ಹೆಸರಿನಲ್ಲಿ ದೀಕ್ಷಾಸ್ನಾನ ಮಾಡಿಸಿರಿ. ನಾನು ನಿಮಗೆ ಆಜ್ಞಾಪಿಸಿದ ಎಲ್ಲವನ್ನು ಅನುಸರಿಸುವುದಕ್ಕೆ ಅವರಿಗೆ ಉಪದೇಶ ಮಾಡಿರಿ ಎಂದು ಹೇಳುತ್ತೇನೆ. ನಾನು ಯಾವಾಗಲೂ ನಿಮ್ಮೊಂದಿಗೆ ಇರುತ್ತೇನೆ ಎಂದು ನೆನಪಿಟ್ಟುಕೊಳ್ಳಿರಿ " ಎಂದು ಹೇಳಿದನು.
ಯೇಸು ಸತ್ತವರೊಳಗಿಂದ ಎದ್ದುಬಂದು ನಲವತ್ತು ದಿನಗಳಾದ ಬಳಿಕ ಆತನು ತನ್ನ ಶಿಷ್ಯರಿಗೆ, "ನನ್ನ ತಂದೆಯು ನಿಮಗೆ ಶಕ್ತಿಯನ್ನು ದಯಪಾಲಿಸುವವರೆಗೂ ಯೆರೂಸಲೇಮಿನಲ್ಲಿ ಕಾದುಕೊಂಡಿರಿ. ಆತನು ನಿನ್ನ ಮೇಲೆ ಪವಿತ್ರಾತ್ಮನನ್ನು ಕಳುಹಿಸುವ ಮೂಲಕ ಇದನ್ನು ಮಾಡುತ್ತಾನೆ" ಎಂದು ಹೇಳಿದನು. ಆಗ ಯೇಸು ಪರಲೋಕಕ್ಕೆ ಏರಿಹೋದನು ಮತ್ತು ಮೋಡವೊಂದು ಆತನನ್ನು ಕವಿದುಕೊಂಡಿದ್ದರಿಂದ, ಆತನು ಅವರ ಕಣ್ಣಿಗೆ ಮರೆಯಾದನು. ಸಕಲವನ್ನು ಆಳಲು ಯೇಸು ಪರಲೋಕದಲ್ಲಿ ದೇವರ ಬಲಗಡೆಯಲ್ಲಿ ಅಸೀನನಾದನು.