unfoldingWord 38 - ಯೇಸುವಿಗೆ ದ್ರೋಹ ಬಗೆದ ವಿಚಾರ
Outline: Matthew 26:14-56; Mark 14:10-50; Luke 22:1-53; John 18:1-11
Broj skripte: 1238
Jezik: Kannada
Publika: General
Žanr: Bible Stories & Teac
Svrha: Evangelism; Teaching
Bible Kuotation: Paraphrase
Status: Approved
Skripte su osnovne smernice za prevođenje i snimanje na druge jezike. Treba ih prilagoditi po potrebi kako bi bili razumljivi i relevantni za svaku različitu kulturu i jezik. Neki termini i koncepti koji se koriste možda će trebati dodatno objašnjenje ili čak biti zamenjeni ili potpuno izostavljeni.
Script Tekt
ಪ್ರತಿ ವರ್ಷವು ಯೆಹೂದ್ಯರು ಪಸ್ಕಹಬ್ಬವನ್ನು ಆಚರಿಸುತ್ತಿದ್ದರು. ಅನೇಕ ಶತಮಾನಗಳ ಹಿಂದೆ ಈಜಿಪ್ಟಿನ ಗುಲಾಮಗಿರಿಯಿಂದ ದೇವರು ತಮ್ಮ ಪೂರ್ವಿಕರನ್ನು ಹೇಗೆ ಬಿಡಿಸಿದ್ದನೆಂಬುದರ ಕುರಿತಾದ ಆಚರಣೆಯಾಗಿದೆ. ಯೇಸು ಸಾರ್ವಜನಿಕವಾಗಿ ಉಪದೇಶಿಸಲು ಮತ್ತು ಬೋಧಿಸಲು ಪ್ರಾರಂಭಿಸಿ ಸುಮಾರು ಮೂರು ವರ್ಷಗಳಾದ ನಂತರ ಇದೇ ಮೊದಲ ಬಾರಿಗೆ, ಯೇಸು ತನ್ನ ಶಿಷ್ಯರಿಗೆ ಈ ಪಸ್ಕವನ್ನು ಯೆರೂಸಲೇಮಿನಲ್ಲಿ ಅವರೊಂದಿಗೆ ಆಚರಿಸಲು ಬಯಸಿದ್ದು ಮತ್ತು ಅಲ್ಲಿ ತಾನು ಕೊಲ್ಲಲ್ಪಡುವನು ಎಂದು ಹೇಳಿದನು.
ಯೇಸುವಿನ ಶಿಷ್ಯರಲ್ಲಿ ಯೂದನೆಂಬ ಒಬ್ಬ ಮನುಷ್ಯನಿದ್ದನು. ಯೂದನು ಅಪೊಸ್ತಲರ ಹಣದ ಚೀಲದ ಮೇಲ್ವಿಚಾರಕನಾಗಿದ್ದನು, ಆದರೆ ಅವನು ಅನೇಕಬಾರಿ ಆ ಚೀಲದಿಂದ ಹಣವನ್ನು ಕಳವು ಮಾಡಿದ್ದನು. ಯೇಸು ಮತ್ತು ಶಿಷ್ಯರು ಯೆರೂಸಲೇಮಿಗೆ ಬಂದ ನಂತರ ಯೂದನು ಯೆಹೂದ್ಯ ಮುಖಂಡರ ಬಳಿಗೆ ಹೋದನು. ಹಣಕ್ಕೆ ಬದಲಾಗಿ ಯೇಸುವನ್ನು ಅವರಿಗೆ ಹಿಡಿದುಕೊಡುವ ಮೂಲಕ ಯೇಸುವಿಗೆ ದ್ರೋಹ ಬಗೆಯುವ ಪ್ರಸ್ತಾಪವನ್ನು ಅವನು ಅವರ ಮುಂದಿಟ್ಟನು. ಯೆಹೂದ್ಯ ಮುಖಂಡರು ಯೇಸುವನ್ನು ಮೆಸ್ಸೀಯನನ್ನಾಗಿ ಅಂಗೀಕರಿಸಿಕೊಂಡಿರಲಿಲ್ಲ ಎಂದು ಅವನಿಗೆ ತಿಳಿದಿತ್ತು. ಅವರು ಆತನನ್ನು ಕೊಲ್ಲಲು ಬಯಸಿದ್ದರು ಎಂದು ಅವನಿಗೆ ತಿಳಿದಿತ್ತು.
ಯೇಸುವನ್ನು ತಮಗೆ ಹಿಡಿದುಕೊಡುವ ಮೂಲಕ ಆತನಿಗೆ ದ್ರೋಹ ಬಗೆಯಲು, ಮಹಾಯಾಜಕನ ನೇತೃತ್ವದಲ್ಲಿ ಯೆಹೂದ್ಯ ಮುಖಂಡರು ಯೂದನಿಗೆ ಮೂವತ್ತು ಬೆಳ್ಳಿ ನಾಣ್ಯಗಳನ್ನು ಕೊಟ್ಟರು. ಇದು ಪ್ರವಾದಿಗಳು ಹೇಳಿದಂತೆಯೇ ಸಂಭವಿಸಿತು. ಯೂದನು ಒಪ್ಪಿಕೊಂಡು, ಹಣವನ್ನು ತೆಗೆದುಕೊಂಡು ಹೊರಟುಹೋದನು. ಅವರು ಯೇಸುವನ್ನು ಬಂಧಿಸಲು ಸಹಾಯಕವಾಗುವಂಥ ಒಂದು ಅವಕಾಶಕ್ಕಾಗಿ ಅವನು ಎದುರುನೋಡಲಾರಂಭಿಸಿದರು.
ಯೆರೂಸಲೇಮಿನಲ್ಲಿ ಯೇಸು ತನ್ನ ಶಿಷ್ಯರೊಂದಿಗೆ ಪಸ್ಕಹಬ್ಬವನ್ನು ಆಚರಿಸಿದನು. ಪಸ್ಕಹಬ್ಬದ ಊಟದ ಸಮಯದಲ್ಲಿ ಯೇಸು ರೊಟ್ಟಿಯನ್ನು ತೆಗೆದುಕೊಂಡು ಅದನ್ನು ಮುರಿದುಬಿಟ್ಟು, “ಇದನ್ನು ತೆಗೆದುಕೊಂಡು ತಿನ್ನಿರಿ, ಇದು ನಿಮಗೋಸ್ಕರ ಕೊಟ್ಟಿರುವ ನನ್ನ ದೇಹ, ನನ್ನನ್ನು ನೆನಪಿಸಿಕೊಳ್ಳುವುದಕ್ಕೋಸ್ಕರ ಹೀಗೆ ಮಾಡಿರಿ" ಎಂದು ಹೇಳಿದನು. ಈ ರೀತಿಯಾಗಿ, ಯೇಸು ತಾನು ಅವರಿಗಾಗಿ ಸಾಯುವನೆಂದು , ಅಂದರೆ ತನ್ನ ದೇಹವನ್ನು ಯಜ್ಞವಾಗಿ ಅರ್ಪಿಸುವೆನು ಎಂದು ಹೇಳಿದನು
ಅಮೇಲೆ ಯೇಸು ದ್ರಾಕ್ಷಾರಸದ ಪಾತ್ರೆಯನ್ನು ತೆಗೆದುಕೊಂಡು, "ಇದನ್ನು ಕುಡಿಯಿರಿ. ದೇವರು ನಿಮ್ಮ ಪಾಪಗಳನ್ನು ಕ್ಷಮಿಸುವಂತೆ ನಾನು ನಿಮಗಾಗಿ ಸುರಿಸಲ್ಪಡುವ ನನ್ನ ರಕ್ತ ಹೊಸ ಒಡಂಬಡಿಕೆಯ ರಕ್ತ. ನೀವು ಇದನ್ನು ಕುಡಿಯುವ ಪ್ರತಿಯೊಂದು ಸಾರಿಯು ನನ್ನನ್ನು ನೆನಪಿಸಿಕೊಳ್ಳುವುದಕ್ಕಾಗಿ ನಾನು ಈಗ ಮಾಡುತ್ತಿರುವುದನ್ನು ನೀವು ಮಾಡಿರಿ."
ಆಗ ಯೇಸು ತನ್ನ ಶಿಷ್ಯರಿಗೆ, "ನಿಮ್ಮಲ್ಲಿ ಒಬ್ಬನು ನನ್ನನ್ನು ಹಿಡಿದುಕೊಡುವನು" ಎಂದು ಹೇಳಿದನು. ಶಿಷ್ಯರು ಆಘಾತಕ್ಕೊಳಗಾದರು, ಮತ್ತು ಅಂತಹ ಕೆಲಸವನ್ನು ಮಾಡುವವನು ಯಾರು ಎಂದು ಕೇಳಿದರು. ಯೇಸು, "ನಾನು ಈ ರೊಟ್ಟಿಯ ತುಂಡನ್ನು ಯಾರಿಗೆ ಕೊಡುತ್ತೇನೋ, ಅವನೇ ದ್ರೋಹ ಬಗೆಯುವವನು" ಎಂದು ಹೇಳಿ ಆ ರೊಟ್ಟಿಯನ್ನು ಆತನು ಯೂದನಿಗೆ ಕೊಟ್ಟನು.
ಯೂದನು ರೊಟ್ಟಿಯನ್ನು ತೆಗೆದುಕೊಂಡ ಕೂಡಲೇ, ಸೈತಾನನು ಅವನೊಳಗೆ ಪ್ರವೇಶಿಸಿದನು. ಯೇಸುವನ್ನು ಬಂಧಿಸಲು ಯೆಹೂದ್ಯ ಮುಖಂಡರಿಗೆ ಸಹಾಯ ಮಾಡುವುದಕ್ಕಾಗಿ ಯೂದನು ಹೊರಟುಹೋದನು. ಅದು ರಾತ್ರಿಯ ಸಮಯವಾಗಿತ್ತು.
ಊಟವಾದ ನಂತರ ಯೇಸು ಮತ್ತು ಆತನ ಶಿಷ್ಯರು ಎಣ್ಣೇಮರದ ಗುಡ್ಡಕ್ಕೆ ನಡೆದುಕೊಂಡು ಹೋದರು. ಯೇಸು, "ಕುರುಬನನ್ನು ಹೊಡೆಯುವೆನು, ಹಿಂಡಿನ ಕುರಿಗಳು ಚದರಿಹೋಗುವವು ಎಂದು ಬರೆದಿರುವ ಹಾಗೆ ನೀವೆಲ್ಲರೂ ಈ ರಾತ್ರಿ ನನ್ನನ್ನು ತೊರೆದು ಹೋಗುವಿರಿ" ಎಂದು ಹೇಳಿದನು.
ಪೇತ್ರನು, "ಎಲ್ಲರೂ ನಿನ್ನನ್ನು ಬಿಟ್ಟುಹೋದರೂ ನಾನು ಮಾತ್ರ ನಿನ್ನನ್ನು ಬಿಟ್ಟುಹೋಗುವುದಿಲ್ಲ!" ಎಂದು ಉತ್ತರಿಸಿದನು. ಆಗ ಯೇಸು ಪೇತ್ರನಿಗೆ, "ಸೈತಾನನು ನಿಮ್ಮೆಲ್ಲರನ್ನು ನಾಶಮಾಡಲು ಬಯಸಿದನು, ಆದರೆ ನಿನ್ನ ನಂಬಿಕೆಯು ಕುಂದಿಹೋಗಬಾರದು ಎಂದು ನಾನು ನಿನಗಾಗಿ ಪ್ರಾರ್ಥಿಸಿದೆನು. ಆದರೂ ಸಹ, ಈ ರಾತ್ರಿಯಲ್ಲಿ ಕೋಳಿ ಕೂಗುವ ಮುನ್ನ ನೀನು ನನ್ನನ್ನು ಅರಿಯನೆಂದು ಮೂರು ಸಾರಿ ನಿರಾಕರಿಸುವಿ."
ಆಗ ಪೇತ್ರನು ಯೇಸುವಿಗೆ, "ನಾನು ಸಾಯಬೇಕಾದರೂ ಸಹ ನಾನು ನಿನ್ನನ್ನು ಎಂದಿಗೂ ಅಲ್ಲಗಳೆಯುವುದಿಲ್ಲ" ಎಂದು ಹೇಳಿದನು. ಅದರಂತೆಯೇ ಇತರ ಶಿಷ್ಯರೆಲ್ಲರೂ ಹೇಳಿದರು.
ಅನಂತರ ಯೇಸು ತನ್ನ ಶಿಷ್ಯರೊಂದಿಗೆ ಗೆತ್ಸೇಮನೆ ಎಂಬ ಸ್ಥಳಕ್ಕೆ ಹೋದನು. ಸೈತಾನನು ತಮ್ಮನ್ನು ಅವರನ್ನು ಶೋಧಿಸದಂತೆ ಪ್ರಾರ್ಥಿಸಬೇಕು ಎಂದು ಯೇಸು ತನ್ನ ಶಿಷ್ಯರಿಗೆ ಹೇಳಿದನು. ತರುವಾಯ ಯೇಸು ಪ್ರಾರ್ಥಿಸಲು ಹೋದನು.
ಯೇಸು ಮೂರು ಬಾರಿ, "ನನ್ನ ತಂದೆಯೇ, ಸಾಧ್ಯವಾದರೆ, ದಯವಿಟ್ಟು ಈ ಸಂಕಷ್ಟದ ಪಾತ್ರೆಯಿಂದ ಕುಡಿಯದಂತೆ ಮಾಡು, ಆದರೆ ಜನರ ಪಾಪಗಳನ್ನು ಕ್ಷಮಿಸಲು ಬೇರೆ ಮಾರ್ಗವಿಲ್ಲದಿದ್ದರೆ, ನಿನ್ನ ಚಿತ್ತವನ್ನು ನೆರವೇರಲಿ" ಎಂದು ಪ್ರಾರ್ಥಿಸಿದನು. ಯೇಸು ಬಹಳ ಮನಗುಂದಿದವನಾದನು ಮತ್ತು ಆತನ ಬೆವರು ರಕ್ತದ ಹನಿಗಳಂತೆ ಇತ್ತು. ದೇವರು ಆತನನ್ನು ಬಲಪಡಿಸಲು ದೇವದೂತನನ್ನು ಕಳುಹಿಸಿದನು.
ಪ್ರತಿ ಬಾರಿ ಪ್ರಾರ್ಥನೆ ಮಾಡಿದ ನಂತರ, ಯೇಸು ತನ್ನ ಶಿಷ್ಯರ ಬಳಿಗೆ ಹಿಂದಿರುಗಿ ಬಂದನು, ಆದರೆ ಅವರು ನಿದ್ದೆ ಮಾಡುತ್ತಿದ್ದರು. ಆತನು ಮೂರನೆಯ ಬಾರಿಗೆ ಹಿಂದಿರುಗಿ ಬಂದಾಗ ಯೇಸು, "ಎದ್ದೇಳಿರಿ, ನನಗೆ ದ್ರೋಹ ಬಗೆಯುವವನು ಇಲ್ಲಿಗೆ ಬಂದಿದ್ದಾನೆ" ಎಂದು ಹೇಳಿದನು.
ಯೂದನು ಯೆಹೂದ್ಯ ಮುಖಂಡರು, ಸೈನಿಕರು ಮತ್ತು ಬಹು ಜನರ ಗುಂಪಿನ ಸಂಗಡ ಅಲ್ಲಿಗೆ ಬಂದನು. ಅವರು ಕತ್ತಿಗಳನ್ನು ಮತ್ತು ದೊಣ್ಣೆಗಳನ್ನು ಹಿಡಿದುಕೊಂಡು ಬಂದರು. ಯೂದನು ಯೇಸುವಿನ ಬಳಿಗೆ ಬಂದು, "ವಂದನೆ , ಗುರುವೇ," ಎಂದು ಹೇಳಿ ಆತನಿಗೆ ಮುದ್ದಿಟ್ಟನು. ಬಂಧಿಸಬೇಕಾದ ಮನುಷ್ಯನನ್ನು ಯೆಹೂದ್ಯ ಮುಖಂಡರಿಗೆ ತೋರಿಸಿಕೊಡುವುದಕ್ಕಾಗಿ ಅವನು ಇದನ್ನು ಮಾಡಿದನು. ಆಗ ಯೇಸು, ಯೂದನಿಗೆ, “ಮುದ್ದಿಟ್ಟು ನನ್ನನ್ನು ಹಿಡಿದುಕೊಡುತ್ತೀಯಾ?" ಎಂದು ಕೇಳಿದನು.
ಸೈನಿಕರು ಯೇಸುವನ್ನು ಬಂಧಿಸುತ್ತಿರುವಾಗ, ಪೇತ್ರನು ತನ್ನ ಕತ್ತಿಯನ್ನು ತೆಗೆದು ಮಹಾಯಾಜಕನ ಸೇವಕನ ಕಿವಿಯನ್ನು ಕತ್ತರಿಸಿಬಿಟ್ಟನು. ಯೇಸು, "ನಿನ್ನ ಕತ್ತಿಯನ್ನು ತಿರುಗಿ ಒರೆಯಲ್ಲಿ ಹಾಕು! ನನ್ನನ್ನು ರಕ್ಷಿಸುವುದಕ್ಕೆ ದೇವದೂತರ ಸೈನ್ಯ ಕಳುಹಿಸು ಎಂದು ನಾನು ತಂದೆಯನ್ನು ಬೇಡಿಕೊಳ್ಳಬಹುದು, ಆದರೆ ನಾನು ನನ್ನ ತಂದೆಗೆ ವಿಧೇಯನಾಗಬೇಕು" ಎಂದು ಹೇಳಿದನು. ಆಗ ಯೇಸು ಮನುಷ್ಯನ ಕಿವಿಯನ್ನು ಗುಣಪಡಿಸಿದನು. ಆಗ ಶಿಷ್ಯರೆಲ್ಲರೂ ಓಡಿಹೋದರು.