unfoldingWord 47 - ಫಿಲಿಪ್ಪಿ ಪಟ್ಟಣದಲ್ಲಿ ಪೌಲನು ಮತ್ತು ಸೀಲನು
개요: Acts 16:11-40
스크립트 번호: 1247
언어: Kannada
청중: General
목적: Evangelism; Teaching
Features: Bible Stories; Paraphrase Scripture
지위: Approved
이 스크립트는 다른 언어로 번역 및 녹음을위한 기본 지침입니다. 그것은 그것이 사용되는 각 영역에 맞게 다른 문화와 언어로 조정되어야 합니다. 사용되는 몇 가지 용어와 개념은 다른 문화에서는 다듬어지거나 생략해야 할 수도 있습니다.
스크립트 텍스트
ಸೌಲನು ರೋಮನ್ ಸಾಮ್ರಾಜ್ಯದಾದ್ಯಂತ ಪ್ರಯಾಣ ಮಾಡುವಾಗ, ಅವನು "ಪೌಲ್" ಎಂಬ ತನ್ನ ರೋಮನ್ ಹೆಸರನ್ನು ಬಳಸಲಾರಂಭಿಸಿದನು. ಒಂದು ದಿನ, ಪೌಲ ಮತ್ತು ಅವನ ಸ್ನೇಹಿತನಾದ ಸೀಲನು ಯೇಸುವಿನ ಸುವಾರ್ತೆಯನ್ನು ಸಾರಲು ಫಿಲಿಪ್ಪಿಯ ಪಟ್ಟಣಕ್ಕೆ ಹೋದರು. ಪಟ್ಟಣದ ಹೊರಗಿರುವ ನದೀತೀರದ ಸ್ಥಳಕ್ಕೆ ಅವರು ಹೋದರು, ಜನರು ಪ್ರಾರ್ಥಿಸುವುದಕ್ಕಾಗಿ ಅಲ್ಲಿ ಕೂಡಿಬರುತ್ತಿದ್ದರು. ಅಲ್ಲಿ ಅವರು ವರ್ತಕಳಾಗಿದ್ದ ಲುದ್ಯಳೆಂಬ ಸ್ತ್ರೀಯನ್ನು ಭೇಟಿಯಾದರು. ಅವಳು ದೇವರನ್ನು ಪ್ರೀತಿಸಿಸುವವಳು ಆರಾಧಿಸುವವಳು ಆಗಿದ್ದಳು.
ಯೇಸುವಿನ ಕುರಿತಾದ ಸಂದೇಶವನ್ನು ನಂಬುವಂತೆ ದೇವರು ಲುದ್ಯಳನ್ನು ಶಕ್ತಗೊಳಿಸಿದನು. ಪೌಲ ಸೀಲರು ಅವಳನ್ನು ಮತ್ತು ಅವಳ ಕುಟುಂಬದವರನ್ನು ದೀಕ್ಷಾಸ್ನಾನ ಮಾಡಿಸಿದರು. ಅವಳು ಪೌಲ ಸೀಲರನ್ನು ತನ್ನ ಮನೆಗೆ ಬಂದು ಉಳಿದುಕೊಳ್ಳುವಂತೆ ಆಹ್ವಾನಿಸಿದಳು, ಆದ್ದರಿಂದ ಅವರು ಅಲ್ಲಿ ಉಳಿದುಕೊಂಡರು.
ಯೆಹೂದ್ಯರು ಪ್ರಾರ್ಥಿಸುತ್ತಿದ್ದ ಸ್ಥಳದಲ್ಲಿ ಪೌಲ ಸೀಲರು ಅನೇಕಸಾರಿ ಜನರನ್ನು ಸಂಧಿಸುತ್ತಿದ್ದರು. ಪ್ರತಿದಿನ ಅವರು ಅಲ್ಲಿಗೆ ನಡೆಡುಕೊಂಡು ಹೋಗುತ್ತಿರುವಾಗ, ದೆವ್ವ ಹಿಡಿದ್ದಿದ ದಾಸಿಯು ಅವರನ್ನು ಹಿಂಬಾಲಿಸುತ್ತಿದ್ದಳು. ಈ ದೆವ್ವದ ಮೂಲಕ ಅವಳು ಜನರಿಗೆ ಭವಿಷ್ಯದ ಬಗ್ಗೆ ಕಣಿ ಹೇಳುತ್ತಿದ್ದಳು, ಅವಳು ಕಣಿ ಹೇಳುವುದರಿಂದ ತನ್ನ ಯಜಮಾನರಿಗೆ ತುಂಬಾ ಹಣ ಸಂಪಾದಿಸಿಕೊಡುತ್ತಿದ್ದಳು.
ಅವರು ನಡೆದುಹೋಗುತ್ತಿರುವಾಗ ಆ ದಾಸಿಯು, "ಈ ಮನುಷ್ಯರು ಪರಾತ್ಪರನಾದ ದೇವರ ಸೇವಕರು. ಅವರು ನಿಮಗೆ ರಕ್ಷಣೆಯ ಮಾರ್ಗವನ್ನು ಸಾರುತ್ತಾರೆ!" ಎಂದು ಕೂಗುತ್ತಿದ್ದಳು. ಅವಳು ಪದೇಪದೇ ಹೀಗೆ ಮಾಡುತ್ತಿದ್ದುದರಿಂದ ಪೌಲನು ಬೇಸರಗೊಂಡನು.
ಅಂತಿಮವಾಗಿ, ಒಂದು ದಿನ ದಾಸಿಯು ಕೂಗಲು ಪ್ರಾರಂಭಿಸಿದಾಗ, ಪೌಲನು ಅವಳ ಕಡೆಗೆ ತಿರುಗಿಕೊಂಡು, ಅವಳಲ್ಲಿದ್ದ ದೆವ್ವಕ್ಕೆ, "ಯೇಸುವಿನ ನಾಮದಲ್ಲಿ ಇವಳನ್ನು ಬಿಟ್ಟು ಹೋಗು" ಎಂದು ಹೇಳಿದನು. ತಕ್ಷಣವೇ ದೆವ್ವವು ಅವಳನ್ನು ಬಿಟ್ಟುಹೋಯಿತು.
ದಾಸಿಯ ಯಜಮಾನರು ಬಹಳ ಕೋಪಗೊಂಡರು! ದೆವ್ವದ ಸಹಾಯವಿಲ್ಲದೆ ಜನರಿಗೆ ಭವಿಷ್ಯವನ್ನು ಹೇಳಲು ದಾಸಿಯಿಂದ ಆಗುವುದಿಲ್ಲ ಎಂದು ಅವರು ಅರಿತುಕೊಂಡರು. ಜನರಿಗೆ ಮುಂದೆ ಏನು ಸಂಭವಿಸಬಹುದು ಎಂದು ಹೇಳುವುದಕ್ಕೆ ಅವಳಿಗೆ ಸಾಧ್ಯವಾಗದೆ ಇರಬಹುದು ಮತ್ತು ಜನರು ಅವಳ ಯಜಮಾನರಿಗೆ ಹಣವನ್ನು ಕೊಡುವುದಿಲ್ಲ ಎಂಬುದು ಇದರ ಅರ್ಥವಾಗಿದೆ.
ಆದ್ದರಿಂದ ದಾಸಿಯ ಯಜಮಾನರು ಪೌಲ ಸೀಲರನ್ನು ರೋಮನ್ ಅಧಿಕಾರಿಗಳ ಬಳಿಗೆ ಎಳೆದುಕೊಂಡು ಹೋದರು. ಅವರು ಪೌಲ ಸೀಲರನ್ನು ಹೊಡೆದರು, ಅನಂತರ ಅವರನ್ನು ಸೆರೆಮನೆಗೆ ಹಾಕಿದರು.
ಅವರು ಪೌಲ ಸೀಲರನ್ನು ಹೆಚ್ಚು ಕಾವಲುಗಾರರಿದ್ದ ಸೆರೆಮನೆಯ ಭಾಗದಲ್ಲಿ ಹಾಕಿದರು. ಅವರು ಅವರ ಕಾಲುಗಳಿಗೆ ಮರದ ದೊಡ್ಡ ದಿಮ್ಮಿಗಳನ್ನು ಬಿಗಿದರು. ಆದರೆ ಮಧ್ಯರಾತ್ರಿಯಲ್ಲಿ ಪೌಲ ಸೀಲರು ದೇವರಿಗೆ ಸ್ತುತಿಗೀತೆಗಳನ್ನು ಹಾಡುತ್ತಿದ್ದರು.
ಇದ್ದಕ್ಕಿದ್ದಂತೆ ಭೀಕರವಾದ ಭೂಕಂಪ ಉಂಟಾಯಿತು! ಸೆರೆಮನೆಯ ಕದಗಳೆಲ್ಲಾ ತೆರೆದವು, ಕೈದಿಗಳೆಲ್ಲರ ಬೇಡಿಗಳು ಕಳಚಿಬಿದ್ದವು.
ಆಗ ಸೆರೆಮನೆಯ ಅಧಿಕಾರಿಗೆ ಎಚ್ಚರವಾಯಿತು. ಸೆರೆಮನೆಯ ಕದಗಳು ತೆರೆದಿರುವುದನ್ನು ಅವನು ಕಂಡನು. ಕೈದಿಗಳೆಲ್ಲರು ತಪ್ಪಿಸಿಕೊಂಡಿದ್ದಾರೆಂದು ಅವನು ಭಾವಿಸಿದನು. ಅವರನ್ನು ತಪ್ಪಿಸಿಕೊಂಡು ಹೋಗಲು ಬಿಟ್ಟಿದ್ದಕ್ಕಾಗಿ ರೋಮನ್ ಅಧಿಕಾರಿಗಳು ತನ್ನನ್ನು ಕೊಲ್ಲುತ್ತಾರೆ ಎಂದು ಅವನು ಭಯಪಟ್ಟು, ಆತ್ಮಹತ್ಯೆ ಮಾಡಿಕೊಳ್ಳಬೇಕೆಂದಿದ್ದನು! ಆದರೆ ಪೌಲನು ಅವನನ್ನು ನೋಡಿ, "ನಿಲ್ಲಿಸು! ನೀನೇನೂ ಹಾನಿಮಾಡಿಕೊಳ್ಳಬೇಡ, ನಾವೆಲ್ಲಾ ಇಲ್ಲೇ ಇದ್ದೇವೆ" ಎಂದು ಕೂಗಿದರು.
ಸೆರೆಮನೆಯ ಅಧಿಕಾರಿಯು ನಡುಗುತ್ತಾ ಪೌಲ ಸೀಲರ ಮುಂದೆ ಬಂದು, "ರಕ್ಷಣೆಹೊಂದುವುದಕ್ಕೆ ನಾನೇನು ಮಾಡಬೇಕು?" ಎಂದು ಕೇಳಿದನು. ಪೌಲನು, "ಕರ್ತನಾದ ಯೇಸುವಿನ ಮೇಲೆ ನಂಬಿಕೆಯಿಡು, ಆಗ ನೀನು ರಕ್ಷಣೆ ಹೊಂದುವಿ, ನಿನ್ನ ಮನೆಯವರೂ ರಕ್ಷಣೆಹೊಂದುವರು" ಎಂದು ಹೇಳಿದನು. ಆಗ ಸೆರೆಮನೆಯ ಅಧಿಕಾರಿಯು ಪೌಲ ಸೀಲರನ್ನು ತನ್ನ ಮನೆಗೆ ಕರೆದುಕೊಂಡು ಹೋಗಿ ಅವರ ಗಾಯಗಳನ್ನು ತೊಳೆದನು. ಪೌಲನು ಅವನ ಮನೆಯಲ್ಲಿದ್ದವರೆಲ್ಲರಿಗೂ ಯೇಸುವಿನ ಸುವಾರ್ತೆಯನ್ನು ಸಾರಿದನು.
ಸೆರೆಮನೆಯ ಅಧಿಕಾರಿಯು ಮತ್ತು ಅವನ ಕುಟುಂಬದವರು ಯೇಸುವನ್ನು ನಂಬಿದರು, ಆದ್ದರಿಂದ ಪೌಲ ಸೀಲರು ಅವರಿಗೆ ದೀಕ್ಷಾಸ್ನಾನ ಮಾಡಿಸಿದರು. ಆಗ ಸೆರೆಮನೆಯ ಅಧಿಕಾರಿಯು ಪೌಲ ಸೀಲರಿಗೆ ಊಟ ಬಡಿಸಿದನು ಮತ್ತು ಅವರು ಒಟ್ಟಾಗಿ ಸಂತೋಷಿಸಿದರು.
ಮರುದಿನ ಪಟ್ಟಣದ ನಾಯಕರು ಪೌಲ ಸೀಲರನ್ನು ಸೆರೆಮನೆಯಿಂದ ಬಿಡುಗಡೆ ಮಾಡಿದರು ಮತ್ತು ಫಿಲಿಪ್ಪಿ ಪಟ್ಟಣವನ್ನು ಬಿಟ್ಟುಹೋಗಬೇಕೆಂದು ಅವರನ್ನು ಬೇಡಿಕೊಂಡರು. ಪೌಲ ಸೀಲರು ಲುದ್ಯಳನ್ನು ಮತ್ತು ಇನ್ನಿತರ ಸ್ನೇಹಿತರನ್ನು ಸಂಧಿಸಿದರು, ಅನಂತರ ಅವರು ಪಟ್ಟಣವನ್ನು ಬಿಟ್ಟು ಹೊರಟು ಹೋದರು. ಯೇಸುವಿನ ಸುವಾರ್ತೆಯು ಹರಡುತ್ತಲೇ ಇತ್ತು ಮತ್ತು ಸಭೆಯು ಬೆಳೆಯುತ್ತಲೇ ಇತ್ತು.
ಪೌಲನು ಮತ್ತು ಇತರ ಕ್ರೈಸ್ತ ನಾಯಕರು ಅನೇಕಾನೇಕ ಪಟ್ಟಣಗಳಿಗೆ ಪ್ರಯಾಣ ಮಾಡುತ್ತಿದ್ದರು. ಅವರು ಯೇಸುವಿನ ಸುವಾರ್ತೆಯನ್ನು ಜನರಿಗೆ ಸಾರಿದರು ಮತ್ತು ಬೋಧಿಸಿದರು. ಸಭೆಗಳಲ್ಲಿದ್ದ ವಿಶ್ವಾಸಿಗಳನ್ನು ಪ್ರೋತ್ಸಾಹಿಸಲು ಮತ್ತು ಅವರಿಗೆ ಬೋಧಿಸಲು ಅವರು ಅನೇಕ ಪತ್ರಿಕೆಗಳನ್ನು ಸಹ ಬರೆದರು. ಈ ಪತ್ರಿಕೆಗಳಲ್ಲಿ ಕೆಲವು ಸತ್ಯವೇದದ ಪುಸ್ತಕಗಳಾಗಿ ಮಾರ್ಪಟ್ಟವು.