unfoldingWord 46 - ಪೌಲನು ಕ್ರೈಸ್ತನಾದದ್ದು

개요: Acts 8:1-3; 9:1-31; 11:19-26; 13-14
스크립트 번호: 1246
언어: Kannada
청중: General
목적: Evangelism; Teaching
Features: Bible Stories; Paraphrase Scripture
지위: Approved
이 스크립트는 다른 언어로 번역 및 녹음을위한 기본 지침입니다. 그것은 그것이 사용되는 각 영역에 맞게 다른 문화와 언어로 조정되어야 합니다. 사용되는 몇 가지 용어와 개념은 다른 문화에서는 다듬어지거나 생략해야 할 수도 있습니다.
스크립트 텍스트

ಯೇಸುವನ್ನು ನಂಬದಂಥ ಸೌಲನೆಂಬ ಒಬ್ಬ ಮನುಷ್ಯನಿದ್ದನು. ಅವನು ಯುವಕನಾಗಿದ್ದಾಗ ಸ್ತೆಫನನನ್ನು ಕೊಂದ ಜನರ ಬಟ್ಟೆಗಳನ್ನು ಕಾದಿದ್ದನು. ತರುವಾಯ ಅವನು ವಿಶ್ವಾಸಿಗಳನ್ನು ಹಿಂಸಿಸಿದನು. ಅವನು ಯೆರೂಸಲೇಮಿನಲ್ಲಿ ಮನೆಮನೆಗಳಿಗೆ ಹೋಗಿ ಗಂಡಸರನ್ನೂ ಹೆಂಗಸರನ್ನೂ ಬಂಧಿಸಿ ಸೆರೆಮನೆಗೆ ಹಾಕಿಸಿದನು. ಆಗ ಮಹಾಯಾಜಕನು ಸೌಲನಿಗೆ ದಮಸ್ಕ ಪಟ್ಟಣಕ್ಕೆ ಹೋಗಲು ಅನುಮತಿ ನೀಡಿದನು. ಅಲ್ಲಿರುವ ಕ್ರೈಸ್ತರನ್ನು ಬಂಧಿಸಿ ಯೆರೂಸಲೇಮಿಗೆ ಕರೆತರುವಂತೆ ಅವನು ಸೌಲನಿಗೆ ಹೇಳಿದನು.

ಆದ್ದರಿಂದ ಸೌಲನು ದಮಸ್ಕಕ್ಕೆ ಪ್ರಯಾಣ ಮಾಡಲಾರಂಭಿಸಿದನು. ಅವನು ಪಟ್ಟಣವನ್ನು ತಲುಪುವುದಕ್ಕಿಂತ ಮೊದಲು ಆಕಾಶದಿಂದ ಒಂದು ಬೆಳಕು ಅವನ ಸುತ್ತಲು ಮಿಂಚಿತು ಮತ್ತು ಅವನು ನೆಲಕ್ಕೆ ಬಿದ್ದನು. ಆಗ “ಸೌಲನೇ, ಸೌಲನೇ, ನೀನು ನನ್ನನ್ನು ಯಾಕೆ ಹಿಂಸೆಪಡಿಸುತ್ತೀ?” ಎಂದು ಯಾರೋ ಹೇಳುವುದನ್ನು ಸೌಲನು ಕೇಳಿಸಿಕೊಂಡನು. ಸೌಲನು, "ಕರ್ತನೇ, ನೀನಾರು?" ಎಂದು ಕೇಳಿದನು. ಯೇಸು ಅವನಿಗೆ, "ನೀನು ಹಿಂಸೆಪಡಿಸುತ್ತಿರುವ ಯೇಸುವೇ ನಾನು!" ಎಂದು ಹೇಳಿದನು.

ಸೌಲನು ಮೇಲೆದ್ದು ಬಂದಾಗ ಅವನಿಗೆ ಕಣ್ಣು ಕಾಣಲಿಲ್ಲ. ಅವನ ಸ್ನೇಹಿತರು ಅವನನ್ನು ದಮಸ್ಕಕ್ಕೆ ಕರೆದುಕೊಂಡು ಹೋದರು. ಮೂರು ದಿನಗಳ ಕಾಲ ಸೌಲನು ಏನೂ ತಿನ್ನಲಿಲ್ಲ ಅಥವಾ ಏನೂ ಕುಡಿಯಲಿಲ್ಲ.

ದಮಸ್ಕದಲ್ಲಿ ಅನನೀಯನೆಂಬ ಒಬ್ಬ ಶಿಷ್ಯನಿದ್ದನು. ದೇವರು ಅವನಿಗೆ, "ಸೌಲನು ತಂಗಿರುವ ಮನೆಗೆ ಹೋಗು, ಅವನ ಕಣ್ಣು ಪುನಃ ಕಾಣುವಂತೆ ಅವನ ಮೇಲೆ ನಿನ್ನ ಕೈಯನ್ನಿಡು " ಎಂದು ಹೇಳಿದನು. ಆದರೆ ಅನನೀಯನು, "ಕರ್ತನೇ, ಆ ಮನುಷ್ಯನು ವಿಶ್ವಾಸಿಗಳನ್ನು ಹೇಗೆ ಹಿಂಸಿಸಿದ್ದಾನೆಂದು ನಾನು ಕೇಳಿದ್ದೇನೆ" ಎಂದು ಹೇಳಿದನು. ದೇವರು ಅವನಿಗೆ, "ನೀನು ಹೋಗು! ನನ್ನ ಹೆಸರನ್ನು ಯೆಹೂದ್ಯರಿಗೂ ಮತ್ತು ಇತರ ಜನಾಂಗಗಳಿಗೂ ಪ್ರಕಟಿಸುವುದಕ್ಕಾಗಿ ಆ ಮನುಷ್ಯನನ್ನು ನಾನು ಆರಿಸಿಕೊಂಡಿದ್ದೇನೆ. ಅವನು ನನ್ನ ಹೆಸರಿನ ನಿಮಿತ್ತ ಬಹಳ ಹಿಂಸೆಯನ್ನು ಅನುಭವಿಸುವನು" ಎಂದು ಉತ್ತರಕೊಟ್ಟನು.

ಅನನೀಯನು ಸೌಲನ ಬಳಿಗೆ ಹೋಗಿ ಅವನ ಮೇಲೆ ತನ್ನ ಕೈಗಳನ್ನು ಇಟ್ಟು, “ನೀನು ಇಲ್ಲಿಗೆ ಬಂದ ದಾರಿಯಲ್ಲಿ ನಿನಗೆ ಕಾಣಿಸಿಕೊಂಡ ಯೇಸು ನಿನಗೆ ಪುನಃ ಕಣ್ಣು ಕಾಣುವಂತೆಯೂ, ನೀನು ಪವಿತ್ರಾತ್ಮಭರಿತನಾಗುವಂತೆಯೂ ನನ್ನನ್ನು ನಿನ್ನ ಬಳಿಗೆ ಕಳುಹಿಸಿದ್ದಾನೆ” ಎಂದು ಹೇಳಿದನು. ತಕ್ಷಣವೇ ಸೌಲನಿಗೆ ಪುನಃ ಕಣ್ಣು ಕಾಣಿಸಿದವು ಮತ್ತು ಅನನೀಯನು ಅವನಿಗೆ ದೀಕ್ಷಾಸ್ನಾನ ಮಾಡಿಸಿದನು. ತರುವಾಯ ಸೌಲನು ಊಟಮಾಡಿ ಬಲಹೊಂದಿದನು.

ಕೂಡಲೇ, ಸೌಲನು ದಮಸ್ಕದಲ್ಲಿದ್ದ ಯೆಹೂದ್ಯರಿಗೆ "ಯೇಸು ದೇವರ ಮಗನು!" ಎಂದು ಸಾರಲು ಪ್ರಾರಂಭಮಾಡಿದನು. ಸೌಲನು ವಿಶ್ವಾಸಿಗಳನ್ನು ಕೊಲ್ಲಲು ಪ್ರಯತ್ನಿಸುವವನಾಗಿದ್ದು ಈಗ ಅವನು ಯೇಸುವನ್ನು ನಂಬಿದವನಾಗಿದ್ದಾನೆ ಎಂದು ಯೆಹೂದ್ಯರು ತಿಳಿದು ಬೆರಗಾದರು! ಸೌಲನು ಯೆಹೂದ್ಯರೊಂದಿಗೆ ವಾದಿಸಿದನು. ಯೇಸುವೇ ಮೆಸ್ಸೀಯನೆಂದು ಅವನು ರುಜುವಾತುಪಡಿಸಿದನು.

ಅನೇಕ ದಿನಗಳಾದ ನಂತರ, ಯೆಹೂದ್ಯರು ಸೌಲನನ್ನು ಕೊಲ್ಲಲು ಒಳಸಂಚು ಮಾಡಿದರು. ಅವರು ಅವನನ್ನು ಕೊಲ್ಲುವುದಕ್ಕಾಗಿ ಪಟ್ಟಣದ ದ್ವಾರಗಳಲ್ಲಿ ಅವನಿಗಾಗಿ ಕಾಯುವುದಕ್ಕೆ ಜನರನ್ನು ಕಳುಹಿಸಿದರು. ಆದರೆ ಸೌಲನಿಗೆ ಆ ಗೂಢಾಲೋಚನೆಯು ತಿಳಿದುಬಂದಿತು ಮತ್ತು ಅವನ ಸ್ನೇಹಿತರು ತಪ್ಪಿಸಿಕೊಳ್ಳಲು ಅವನಿಗೆ ಸಹಾಯ ಮಾಡಿದರು. ಒಂದು ರಾತ್ರಿಯಲ್ಲಿ ಅವರು ಅವನನ್ನು ಪುಟ್ಟಿಯಲ್ಲಿ ಕೂರಿಸಿ ಗೋಡೆಯ ಮೇಲಿಂದ ಕೆಳಕ್ಕೆ ಇಳಿಸಿದರು. ಸೌಲನು ದಮಸ್ಕದಿಂದ ತಪ್ಪಿಸಿಕೊಂಡು ಹೋದ ನಂತರ, ಅವನು ಯೇಸುವಿನ ಬಗ್ಗೆ ಸಾರುವುದನ್ನು ಮುಂದುವರಿಸಿದನು.

ಸೌಲನು ಅಪೊಸ್ತಲರನ್ನು ಭೇಟಿಯಾಗಲು ಯೆರೂಸಲೇಮಿಗೆ ಹೋದನು, ಆದರೆ ಅವರು ಅವನಿಗೆ ಭಯಪಟ್ಟರು. ಅನಂತರ ಬಾರ್ನಬನೆಂಬ ವಿಶ್ವಾಸಿಯು ಸೌಲನನ್ನು ಅಪೊಸ್ತಲರ ಬಳಿಗೆ ಕರೆದುಕೊಂಡು ಹೋದನು. ಸೌಲನು ದಮಸ್ಕದಲ್ಲಿ ಧೈರ್ಯದಿಂದ ಪ್ರಚಾರ ಮಾಡಿದ್ದನ್ನು ಅವನು ಅವರಿಗೆ ಹೇಳಿದನು. ಇದಾದ ನಂತರ, ಅಪೊಸ್ತಲರು ಸೌಲನನ್ನು ಅಂಗೀಕರಿಸಿಕೊಂಡರು.

ಯೆರೂಸಲೇಮಿನಲ್ಲಿ ಉಂಟಾದ ಹಿಂಸೆಯ ನಿಮಿತ್ತ ಓಡಿಹೋದ ಕೆಲವು ಮಂದಿ ವಿಶ್ವಾಸಿಗಳು ಅಂತಿಯೋಕ್ಯ ಪಟ್ಟಣದವರೆಗೂ ಹೋದರು ಮತ್ತು ಯೇಸುವಿನ ಬಗ್ಗೆ ಸಾರಿದರು. ಅಂತಿಯೋಕ್ಯದಲ್ಲಿದ್ದ ಅಧಿಕ ಜನರು ಯೆಹೂದ್ಯರಾಗಿರಲಿಲ್ಲ, ಆದರೆ ಮೊದಲ ಬಾರಿಗೆ, ಅವರಲ್ಲಿ ಅನೇಕರು ಸಹ ವಿಶ್ವಾಸಿಗಳಾದರು. ಈ ಹೊಸ ವಿಶ್ವಾಸಿಗಳಿಗೆ ಯೇಸುವಿನ ಬಗ್ಗೆ ಬೋಧಿಸಲು ಮತ್ತು ಸಭೆಯನ್ನು ಬಲಪಡಿಸಲು ಬಾರ್ನಬನು ಮತ್ತು ಸೌಲನು ಅಲ್ಲಿಗೆ ಹೋದರು. ಅಂತಿಯೋಕ್ಯದಲ್ಲಿಯೇ ಯೇಸುವಿನಲ್ಲಿ ನಂಬಿಕೆಯಿಟ್ಟಿರುವ ವಿಶ್ವಾಸಿಗಳನ್ನು ಪ್ರಥಮಬಾರಿಗೆ "ಕ್ರೈಸ್ತರು" ಎಂದು ಕರೆಯಲಾಯಿತು.

ಒಂದು ದಿನ ಅಂತಿಯೋಕ್ಯದಲ್ಲಿರುವ ಕ್ರೈಸ್ತರು ಉಪವಾಸವಿದ್ದು ಪ್ರಾರ್ಥಿಸುತ್ತಿದ್ದರು. ಪವಿತ್ರಾತ್ಮನು ಅವರಿಗೆ, "ನಾನು ಬಾರ್ನಬ ಮತ್ತು ಸೌಲರನ್ನು ಕರೆದ ಸೇವೆಗಾಗಿ ಅವರನ್ನು ಪ್ರತ್ಯೇಕಿಸಿರಿ" ಎಂದು ಹೇಳಿದನು. ಆದ್ದರಿಂದ ಅಂತಿಯೋಕ್ಯದಲ್ಲಿರುವ ಸಭೆಯವರು ಬಾರ್ನಬನಿಗಾಗಿ ಮತ್ತು ಸೌಲನಿಗಾಗಿ ಪ್ರಾರ್ಥಿಸಿದರು ಮತ್ತು ಅವರ ಮೇಲೆ ಕೈಗಳನ್ನು ಇಟ್ಟರು. ಅನಂತರ ಯೇಸುವಿನ ಸುವಾರ್ತೆಯನ್ನು ಇತರ ಅನೇಕ ಸ್ಥಳಗಳಲ್ಲಿ ಸಾರಲು ಅವರನ್ನು ಕಳುಹಿಸಿಕೊಟ್ಟರು. ಬಾರ್ನಬ ಮತ್ತು ಸೌಲರು ವಿವಿಧ ಜನರ ಗುಂಪುಗಳಿಗೆ ಬೋಧಿಸಿದರು, ಮತ್ತು ಅನೇಕ ಜನರು ಯೇಸುವನ್ನು ನಂಬಿದರು.