unfoldingWord 13 - ಇಸ್ರಾಯೇಲರೊಂದಿಗಿನ ದೇವರ ಒಡಂಬಡಿಕೆ
개요: Exodus 19-34
스크립트 번호: 1213
언어: Kannada
청중: General
목적: Evangelism; Teaching
Features: Bible Stories; Paraphrase Scripture
지위: Approved
이 스크립트는 다른 언어로 번역 및 녹음을위한 기본 지침입니다. 그것은 그것이 사용되는 각 영역에 맞게 다른 문화와 언어로 조정되어야 합니다. 사용되는 몇 가지 용어와 개념은 다른 문화에서는 다듬어지거나 생략해야 할 수도 있습니다.
스크립트 텍스트
ದೇವರು ಇಸ್ರಾಯೇಲ್ಯರನ್ನು ಕೆಂಪು ಸಮುದ್ರದ ಮೂಲಕ ಕರೆದುಕೊಂಡು ಹೋದ ನಂತರ, ಆತನು ಅವರನ್ನು ಸೀನಾಯಿ ಎಂಬ ಬೆಟ್ಟಕ್ಕೆ ಅರಣ್ಯದ ಮೂಲಕ ಕರೆದೊಯ್ದನು. ಇದು ಮೋಶೆಯು ಉರಿಯುವ ಪೊದೆಯನ್ನು ನೋಡಿದಂಥ ಅದೇ ಬೆಟ್ಟವಾಗಿತ್ತು. ಜನರು ಬೆಟ್ಟದ ಅಡಿಯಲ್ಲಿ ತಮ್ಮ ಡೇರೆಗಳನ್ನು ಹಾಕಿಕೊಂಡರು.
ದೇವರು ಮೋಶೆಗೂ ಮತ್ತು ಇಸ್ರಾಯೇಲರೆಲ್ಲರಿಗೂ, "ನೀನು ಯಾವಾಗಲೂ ನನಗೆ ವಿಧೇಯರಾಗಿರಬೇಕು ಮತ್ತು ನಾನು ನಿಮ್ಮೊಂದಿಗೆ ಮಾಡಿಕೊಳ್ಳುವ ಒಡಂಬಡಿಕೆಯನ್ನು ಕೈಕೊಂಡು ನಡೆಯಬೇಕು. ನೀನು ಹೀಗೆ ಮಾಡಿದರೆ, ನೀವು ನನ್ನ ಸ್ವಕೀಯ ಜನವು, ಯಾಜಕರಾಜ್ಯವೂ ಮತ್ತು ಪರಿಶುದ್ದ ಜನವೂ ಆಗಿರುವಿರಿ" ಎಂದು ಹೇಳಿದನು.
ದೇವರು ಅವರ ಬಳಿಗೆ ಬರುವುದಕ್ಕಾಗುವಂತೆ ಜನರು ಮೂರು ದಿವಸಗಳ ಕಾಲ ತಮ್ಮನ್ನೇ ಸಿದ್ಧಪಡಿಸಿಕೊಂಡರು. ಆಗ ದೇವರು ಸೀನಾಯಿ ಬೆಟ್ಟದ ಮೇಲಕ್ಕೆ ಇಳಿದುಬಂದನು. ಆತನು ಇಳಿದುಬಂದಾಗ, ಗುಡುಗು, ಮಿಂಚು, ಹೊಗೆ ಮತ್ತು ತುತ್ತೂರಿಗಳ ಜೋರಾದ ಶಬ್ದಗಳು ಇದ್ದವು. ಆಗ ಮೋಶೆಯು ಬೆಟ್ಟದ ಮೇಲಕ್ಕೆ ಹತ್ತಿಹೋದನು.
ಆಗ ದೇವರು ಜನರೊಂದಿಗೆ ಒಡಂಬಡಿಕೆಯನ್ನು ಮಾಡಿಕೊಂಡನು. ಆತನು ಅವರಿಗೆ ಹೇಳಿದ್ದೇನಂದರೆ, "ನಾನು ನಿಮ್ಮ ದೇವರಾದ ಯೆಹೋವನು, ನಿಮ್ಮನ್ನು ಐಗುಪ್ತದ ಗುಲಾಮತನದಿಂದ ಬಿಡಿಸಿದವನು ನಾನೇ. ನೀವು ಬೇರೆ ಯಾವ ದೇವರನ್ನು ಆರಾಧಿಸಬಾರದು."
"ವಿಗ್ರಹಗಳನ್ನು ಮಾಡಿಕೊಳ್ಳಬಾರದು ಮತ್ತು ಅವುಗಳನ್ನು ಪೂಜಿಸಬಾರದು, ಏಕೆಂದರೆ ಯೆಹೋವನಾದ ನಾನು ಮಾತ್ರವೇ ನಿಮ್ಮ ಏಕೈಕ ದೇವರಾಗಿರಬೇಕು, ನನ್ನ ಹೆಸರನ್ನು ಅಯೋಗ್ಯವಾಗಿ ಬಳಸಬಾರದು, ಸಬ್ಬತ್ ದಿನವನ್ನು ಪರಿಶುದ್ಧ ದಿನವೆಂದು ಆಚರಿಸಬೇಕು. ಬೇರೊಂದು ರೀತಿಯಲ್ಲಿ ಹೇಳುವುದಾದರೆ, ಆರು ದಿನಗಳಲ್ಲಿ ನಿಮ್ಮ ಎಲ್ಲಾ ಕೆಲಸಗಳನ್ನು ಮಾಡಿಕೊಳ್ಳಬೇಕು, ಏಳನೆಯ ದಿನವು ನಿಮಗೆ ವಿಶ್ರಾಂತಿಯ ಮತ್ತು ನನ್ನ ಸ್ಮರಣೆಯ ದಿನವಾಗಿರಬೇಕು."
“ನಿನ್ನ ತಂದೆತಾಯಿಗಳನ್ನು ಸನ್ಮಾನಿಸಬೇಕು. ನರಹತ್ಯಮಾಡಬಾರದು. ವ್ಯಭಿಚಾರಮಾಡಬಾರದು. ಕದಿಯಬಾರದು. ಮತ್ತೊಬ್ಬನ ಮೇಲೆ ಸುಳ್ಳುಸಾಕ್ಷಿಹೇಳಬಾರದು. ನಿನ್ನ ನೆರೆಯವನ ಹೆಂಡತಿಯನ್ನು, ಅವನ ಮನೆಯನ್ನು ಅಥವಾ ಅವನಿಗೆ ಸಂಬಂಧಿಸಿರುವಂಥವುಗಳನ್ನು ಆಶಿಸಬಾರದು” ಎಂದು ತಿಳಿಸಿದನು.
ನಂತರ ದೇವರು ಈ ದಶಾಜ್ಞೆಗಳನ್ನು ಎರಡು ಕಲ್ಲಿನ ಹಲಗೆಗಳಲ್ಲಿ ಬರೆದು ಮೋಶೆಗೆ ಕೊಟ್ಟನು. ಜನರು ಅನುಸರಿಸಬೇಕಾದಂಥ ಇತರ ಅನೇಕ ನಿಯಮಗಳನ್ನು ಮತ್ತು ಕಟ್ಟಳೆಗಳನ್ನು ಸಹ ದೇವರು ಅವರಿಗೆ ಕೊಟ್ಟನು. ಜನರು ಈ ನಿಯಮಗಳಿಗೆ ವಿಧೇಯರಾದರೆ, ಅವರನ್ನು ಆಶೀರ್ವದಿಸುವೆನು ಮತ್ತು ಸಂರಕ್ಷಿಸುವೆನು ಎಂದು ದೇವರು ವಾಗ್ದಾನ ಮಾಡಿದನು. ಆದರೆ ಅವರು ಅವುಗಳಿಗೆ ಅವಿಧೇಯರಾದರೆ ಅವರನ್ನು ಶಿಕ್ಷಿಸುವೆನು ಎಂದು ಆತನು ಹೇಳಿದನು.
ಅವರು ಒಂದು ದೊಡ್ಡ ಗುಡಾರವನ್ನು ಅಂದರೆ ದೇವದರ್ಶನದ ಗುಡಾರವನ್ನು ಸಹ ಮಾಡಬೇಕೆಂದು ದೇವರು ಇಸ್ರಾಯೇಲ್ಯರಿಗೆ ಹೇಳಿದನು. ಈ ಗುಡಾರವನ್ನು ಹೇಗೆ ಮಾಡಬೇಕೆಂದು ಮತ್ತು ಅದರಲ್ಲಿ ಯಾವ ಯಾವ ವಸ್ತುಗಳನ್ನು ಇಡಬೇಕೆಂದು ಆತನು ನಿಖರವಾಗಿ ಅವರಿಗೆ ಹೇಳಿದನು. ಗುಡಾರವನ್ನು ಎರಡು ಕೋಣೆಗಳನ್ನಾಗಿ ಪ್ರತ್ಯೇಕಿಸುವುದಕ್ಕಾಗಿ ದೊಡ್ಡ ಪರದೆಯನ್ನು ಮಾಡಬೇಕೆಂದು ಆತನು ಅವರಿಗೆ ಹೇಳಿದನು. ದೇವರು ಪರದೆಯ ಹಿಂದಿರುವ ಕೋಣೆಯೊಳಗೆ ಬಂದು ಅಲ್ಲಿ ಇರುವನು. ದೇವರು ಇರುವಂಥ ಆ ಕೋಣೆಯೊಳಗೆ ಹೋಗಲು ಮಹಾಯಾಜಕನಿಗೆ ಮಾತ್ರವೇ ಅವಕಾಶ ನೀಡಲಾಗಿತು.
ದೇವದರ್ಶನ ಗುಡಾರದ ಮುಂದೆ ಜನರು ಯಜ್ಞವೇದಿಯನ್ನು ಸಹ ಮಾಡಬೇಕಾಗಿತ್ತು. ಯಾರಾದರೂ ದೇವರ ನಿಯಮಕ್ಕೆ ಅವಿಧೇಯನಾದರೆ ಅಂಥವನು ಆ ಯಜ್ಞವೇದಿಯ ಬಳಿಗೆ ಪ್ರಾಣಿಯನ್ನು ತರಬೇಕಾಗಿತ್ತು. ಯಾಜಕನು ಅದನ್ನು ಕೊಂದು ಯಜ್ಞವೇದಿಯ ಮೇಲಿಟ್ಟು ಅದನ್ನು ದೇವರಿಗೆ ಯಜ್ಞವಾಗಿ ಸಮರ್ಪಿಸುವನು. ಪ್ರಾಣಿಗಳ ರಕ್ತವು ಆ ವ್ಯಕ್ತಿಯ ಪಾಪವನ್ನು ಮರೆಮಾಡುತ್ತದೆ ಎಂದು ದೇವರು ಹೇಳಿದನು. ಈ ರೀತಿಯಾಗಿ, ದೇವರು ಆ ಪಾಪವನ್ನು ಇನ್ನೂ ಮುಂದೆ ನೋಡುತ್ತಿದ್ದಿಲ್ಲ. ಆ ವ್ಯಕ್ತಿಯು ದೇವರ ದೃಷ್ಟಿಯಲ್ಲಿ "ಶುದ್ಧನಾಗುವನು". ದೇವರು ಮೋಶೆಯ ಸಹೋದರನಾದ ಆರೋನನನ್ನು ಮತ್ತು ಆರೋನನ ಸಂತತಿಯವರನ್ನು ತನ್ನ ಯಾಜಕರನ್ನಾಗಿ ಆರಿಸಿಕೊಂಡನು.
ದೇವರು ಅವರಿಗೆ ಕೊಟ್ಟಿರುವ ನಿಯಮಗಳನ್ನು ಅನುಸರಿಸುವೆವು ಎಂದು ಜನರು ಒಪ್ಪಿಕೊಂಡರು. ಅವರು ದೇವರಿಗೆ ಮಾತ್ರವೇ ಸೇರಿದವರಾಗಿದ್ದು ಆತನನ್ನು ಮಾತ್ರವೇ ಆರಾಧಿಸಲು ಒಪ್ಪಿಕೊಂಡರು.
ಮೋಶೆಯು ಸೀನಾಯಿ ಬೆಟ್ಟದ ಮೇಲೆ ಬಹಳ ದಿನಗಳವರೆಗೂ ಇದ್ದನು. ಅವನು ದೇವರೊಂದಿಗೆ ಮಾತನಾಡುತ್ತಿದ್ದನು. ಆದರೆ ಜನರು ಅವನು ತಮ್ಮ ಬಳಿಗೆ ಹಿಂದಿರುಗಿ ಬರುವುದನ್ನು ಕಾಯುತ್ತಾ ಬೇಸತ್ತುಹೋದರು. ಆದ್ದರಿಂದ ಅವರು ಆರೋನನ ಬಳಿಗೆ ಬಂಗಾರವನ್ನು ತೆಗೆದುಕೊಂಡು ಬಂದು, ಅವರು ದೇವರಿಗೆ ಬದಲಾಗಿ ಆರಾಧಿಸುವುದಕ್ಕಾಗುವಂತೆ ಒಂದು ವಿಗ್ರಹವನ್ನು ಮಾಡಿಕೊಡಬೇಕೆಂದು ಅವನನ್ನು ಕೇಳಿಕೊಂಡರು. ಅವರು ಈ ರೀತಿಯಾಗಿ ದೇವರಿಗೆ ವಿರುದ್ಧವಾಗಿ ಘೋರವಾದ ಪಾಪ ಮಾಡಿದರು.
ಆರೋನನು ಹೋರಿಕರುವಿನ ಆಕಾರದಲ್ಲಿ ಬಂಗಾರದ ವಿಗ್ರಹವನ್ನು ಮಾಡಿದನು. ಜನರು ಹುಚ್ಚುಹುಚ್ಚಾಗಿ ವಿಗ್ರಹವನ್ನು ಪೂಜಿಸಲು ಮತ್ತು ಅದಕ್ಕೆ ಯಜ್ಞವನ್ನರ್ಪಿಸಲು ಆರಂಭಿಸಿದರು! ಅವರ ಪಾಪದ ನಿಮಿತ್ತ ದೇವರು ಅವರ ಮೇಲೆ ಬಹಳ ಕೋಪಗೊಂಡನು. ಆತನು ಅವರನ್ನು ನಾಶಮಾಡಬೇಕೆಂದು ಬಯಸಿದ್ದನು. ಆದರೆ ಅವರನ್ನು ಸಾಯಿಸಬಾರದೆಂದು ಮೋಶೆಯು ದೇವರನ್ನು ಬೇಡಿಕೊಂಡನು. ದೇವರು ಅವನ ಪ್ರಾರ್ಥನೆಯನ್ನು ಕೇಳಿ ಅವರನ್ನು ನಾಶಮಾಡಲಿಲ್ಲ.
ಅಂತಿಮವಾಗಿ ಮೋಶೆಯು ಸೀನಾಯಿ ಬೆಟ್ಟದಿಂದ ಕೆಳಗಿಳಿದು ಬಂದನು. ದೇವರು ದಶಾಜ್ಞೆಗಳನ್ನು ಬರೆದುಕೊಟ್ಟಿದಂತಹ ಎರಡು ಕಲ್ಲಿನ ಹಲಗೆಗಳನ್ನು ಅವನು ತೆಗೆದುಕೊಂಡು ಬಂದನು. ನಂತರ ಅವನು ಆ ವಿಗ್ರಹವನ್ನು ನೋಡಿದನು. ಅವನು ಬಹು ಕೋಪಗೊಂಡು, ಆ ಹಲಗೆಗಳನ್ನು ಒಡೆದುಹಾಕಿದನು.
ಆಗ ಮೋಶೆಯು ಆ ವಿಗ್ರಹವನ್ನು ಪುಡಿ ಪುಡಿಯಾಗಿ ಮಾಡಿ , ಆ ಪುಡಿಯನ್ನು ನೀರಿನಲ್ಲಿ ಹಾಕಿದನು ಮತ್ತು ಜನರು ಆ ನೀರನ್ನು ಕುಡಿಯುವಂತೆ ಮಾಡಿದನು. ದೇವರು ಜನರ ಮೇಲೆ ಉಪದ್ರವವನ್ನು ಬರಮಾಡಿದನು ಮತ್ತು ಅವರಲ್ಲಿ ಅನೇಕರು ಸತ್ತುಹೋದರು.
ಮೋಶೆಯು ತಾನು ಒಡೆದುಹಾಕಿದವುಗಳಿಗೆ ಬದಲಾಗಿ ದಶಾಜ್ಞೆಗಳಿಗೋಸ್ಕರ ಕಲ್ಲಿನ ಹೊಸ ಹಲಗೆಗಳನ್ನು ಮಾಡಿದನು. ಅನಂತರ ಅವನು ಮತ್ತೊಮ್ಮೆ ಬೆಟ್ಟವನ್ನು ಹತ್ತಿಹೋಗಿ, ದೇವರು ಜನರನ್ನು ಕ್ಷಮಿಸಬೇಕೆಂದು ಪ್ರಾರ್ಥಿಸಿದನು. ದೇವರು ಮೋಶೆಯ ಪ್ರಾರ್ಥನೆಯನ್ನು ಕೇಳಿ ಅವರನ್ನು ಕ್ಷಮಿಸಿದನು. ದಶಾಜ್ಞೆಗಳಿದ್ದ ಹೊಸ ಹಲಗೆಗಳೊಂದಿಗೆ ಮೋಶೆಯು ಬೆಟ್ಟದಿಂದ ಇಳಿದು ಬಂದನು. ಅನಂತರ ದೇವರು ಇಸ್ರಾಯೇಲ್ಯರನ್ನು ಸೀನಾಯಿ ಬೆಟ್ಟದಿಂದ ವಾಗ್ದತ್ತ ದೇಶದ ಕಡೆಗೆ ನಡೆಸಿದನು.