unfoldingWord 36 - ರೂಪಾಂತರ
ರೂಪರೇಖೆಯನ್ನು: Matthew 17:1-9; Mark 9:2-8; Luke 9:28-36
ಸ್ಕ್ರಿಪ್ಟ್ ಸಂಖ್ಯೆ: 1236
ಭಾಷೆ: Kannada
ಪ್ರೇಕ್ಷಕರು: General
ಉದ್ದೇಶ: Evangelism; Teaching
Features: Bible Stories; Paraphrase Scripture
ಸ್ಥಿತಿ: Approved
ಸ್ಕ್ರಿಪ್ಟ್‌ಗಳು ಇತರ ಭಾಷೆಗಳಿಗೆ ಅನುವಾದ ಮತ್ತು ರೆಕಾರ್ಡಿಂಗ್‌ಗೆ ಮೂಲ ಮಾರ್ಗಸೂಚಿಗಳಾಗಿವೆ. ಪ್ರತಿಯೊಂದು ವಿಭಿನ್ನ ಸಂಸ್ಕೃತಿ ಮತ್ತು ಭಾಷೆಗೆ ಅರ್ಥವಾಗುವಂತೆ ಮತ್ತು ಪ್ರಸ್ತುತವಾಗುವಂತೆ ಅವುಗಳನ್ನು ಅಗತ್ಯವಿರುವಂತೆ ಅಳವಡಿಸಿಕೊಳ್ಳಬೇಕು. ಬಳಸಿದ ಕೆಲವು ನಿಯಮಗಳು ಮತ್ತು ಪರಿಕಲ್ಪನೆಗಳಿಗೆ ಹೆಚ್ಚಿನ ವಿವರಣೆ ಬೇಕಾಗಬಹುದು ಅಥವಾ ಬದಲಾಯಿಸಬಹುದು ಅಥವಾ ಸಂಪೂರ್ಣವಾಗಿ ಬಿಟ್ಟುಬಿಡಬಹುದು.
ಸ್ಕ್ರಿಪ್ಟ್ ಪಠ್ಯ
ಒಂದಾನೊಂದು ದಿನ, ಯೇಸು ತನ್ನ ಶಿಷ್ಯರಾದ ಪೇತ್ರ, ಯಾಕೋಬ, ಮತ್ತು ಯೋಹಾನರನ್ನು ತನ್ನೊಂದಿಗೆ ಕರೆದುಕೊಂಡು ಹೋದನು. (ಯೋಹಾನನೆಂಬ ಶಿಷ್ಯನು, ಯೇಸುವಿಗೆ ದೀಕ್ಷಾಸ್ನಾನ ಮಾಡಿಸಿದ ವ್ಯಕ್ತಿಯಲ್ಲ.) ಅವರು ಪ್ರಾರ್ಥನೆ ಮಾಡುವುದಕ್ಕಾಗಿ ಎತ್ತರವಾದ ಬೆಟ್ಟಕ್ಕೆ ಹೋದರು.
ಯೇಸು ಪ್ರಾರ್ಥಿಸುತ್ತಿರುವಾಗ, ಆತನ ಮುಖವು ಸೂರ್ಯನ ಹಾಗೆ ಪ್ರಕಾಶಿಸಿತು. ಆತನ ವಸ್ತ್ರಗಳು ಬೆಳಕಿನಂತೆ ಬೆಳ್ಳಗಾದವು, ಭೂಲೋಕದಲ್ಲಿರುವ ಯಾವ ಅಗಸನಾದರೂ ಅಷ್ಟು ಬೆಳ್ಳಗೆ ಮಾಡಲಾಗದಷ್ಟು ಬೆಳ್ಳಗಾದವು.
ಆಗ ಮೋಶೆ ಮತ್ತು ಪ್ರವಾದಿಯಾದ ಎಲೀಯನು ಕಾಣಿಸಿಕೊಂಡರು. ಈ ಪುರುಷರು ಈ ಸಂಗತಿಗಿಂತ ನೂರಾರು ವರ್ಷಗಳ ಹಿಂದೆ ಈ ಭೂಮಿಯಲ್ಲಿ ಜೀವಿಸುತ್ತಿದ್ದರು. ಅವರು ಯೇಸುವಿನೊಂದಿಗೆ ಆತನ ಮರಣದ ಬಗ್ಗೆ ಮಾತನಾಡಿದರು, ಯಾಕೆಂದರೆ ಆತನು ಶೀಘ್ರದಲ್ಲಿಯೇ ಯೆರೂಸಲೇಮಿನಲ್ಲಿ ಸಾಯಲಿದ್ದನು.
ಮೋಶೆ ಮತ್ತು ಎಲೀಯನು ಯೇಸುವಿನೊಂದಿಗೆ ಮಾತನಾಡುತ್ತಿರುವಾಗ, ಪೇತ್ರನು ಯೇಸುವಿಗೆ, "ನಾವು ಇಲ್ಲೇ ಇರುವುದು ಒಳ್ಳೆಯದು. ಮೂರು ಗುಡಾರಗಳನ್ನು ಕಟ್ಟೋಣ ನಿನಗೊಂದು, ಮೋಶೆಗೊಂದು, ಎಲೀಯನಿಗೊಂದು" ಎಂದು ಹೇಳಿದನು. ಪೇತ್ರನಿಗೆ ತಾನು ಏನು ಹೇಳುತ್ತಿದ್ದೇನೆಂಬುದೇ ಅವನಿಗೆ ತಿಳಿಯಲಿಲ್ಲ.
ಪೇತ್ರನು ಮಾತನಾಡುತ್ತಿರುವಾಗ, ಪ್ರಕಾಶಮಾನವಾದ ಮೋಡವು ಬಂದು ಅವರ ಮೇಲೆ ಕವಿಯಿತು. ಆ ಮೋಡದೊಳಗಿನಿಂದ ಬಂದ ವಾಣಿಯನ್ನು ಅವರು ಕೇಳಿಸಿಕೊಂಡರು. ಅದು ಹೇಳಿದ್ದೇನಂದರೆ, “ಈತನು ನನ್ನ ಪ್ರಿಯ ಕುಮಾರನು. ಈತನನ್ನು ನಾನು ಮೆಚ್ಚಿಕೊಂಡಿದ್ದೇನೆ. ಈತನಿಗೆ ಕಿವಿಗೊಡಿರಿ.” ಈ ಮೂವರು ಶಿಷ್ಯರು ಬಹಳವಾಗಿ ಹೆದರಿ ಬೋರಲು ಬಿದ್ದರು.
ಆಗ ಯೇಸು ಅವರನ್ನು ಮುಟ್ಟಿ, "ಹೆದರಬೇಡಿರಿ ಏಳಿರಿ" ಎಂದು ಹೇಳಿದನು. ಅವರು ಸುತ್ತಲೂ ನೋಡಿದಾಗ, ಯೇಸು ಮಾತ್ರವೇ ಅಲ್ಲಿದ್ದನು.
ಯೇಸು ಮತ್ತು ಮೂವರು ಶಿಷ್ಯರು ಬೆಟ್ಟದಿಂದ ಇಳಿದು ಹೋದರು. ಆಗ ಯೇಸು ಅವರಿಗೆ, "ಇಲ್ಲಿ ಸಂಭವಿಸಿದ್ದರ ಬಗ್ಗೆ ಯಾರಿಗೂ ಏನೂ ಹೇಳಬೇಡಿರಿ. ನಾನು ಬೇಗನೇ ಸಾಯುತ್ತೇನೆ ಮತ್ತು ನಂತರ ಜೀವಿತನಾಗಿ ಎದ್ದುಬರುತ್ತೇನೆ. ಅದಾದನಂತರ ನೀವು ಜನರಿಗೆ ಈ ಸಂಗತಿಯನ್ನು ಜನರಿಗೆ ತಿಳಿಸಬಹುದು " ಎಂದು ಹೇಳಿದನು.