unfoldingWord 20 - ಸೆರೆವಾಸ (ಗಡೀಪಾರು) ಮತ್ತು ಹಿಂದಿರುಗುವಿಕೆ
Контур: 2 Kings 17; 24-25; 2 Chronicles 36; Ezra 1-10; Nehemiah 1-13
Сценарий нөмірі: 1220
Тіл: Kannada
Аудитория: General
Мақсат: Evangelism; Teaching
Features: Bible Stories; Paraphrase Scripture
Күй: Approved
Сценарийлер басқа тілдерге аудару және жазу үшін негізгі нұсқаулар болып табылады. Оларды әр түрлі мәдениет пен тілге түсінікті және сәйкес ету үшін қажетінше бейімдеу керек. Пайдаланылған кейбір терминдер мен ұғымдар көбірек түсіндіруді қажет етуі немесе тіпті ауыстырылуы немесе толығымен алынып тасталуы мүмкін.
Сценарий мәтіні
ಇಸ್ರಾಯೇಲ್ ರಾಜ್ಯ ಮತ್ತು ಯೆಹೂದ್ಯ ರಾಜ್ಯ ಇವೆರಡೂ ದೇವರಿಗೆ ವಿರುದ್ಧವಾಗಿ ಪಾಪಮಾಡಿತು. ದೇವರು ಸೀನಾಯಿ ಬೆಟ್ಟದಲ್ಲಿ ಅವರೊಂದಿಗೆ ಮಾಡಿಕೊಂಡಿದ ಒಡಂಬಡಿಕೆಯನ್ನು ಅವರು ಮುರಿದುಹಾಕಿದರು. ಅವರು ಪಶ್ಚಾತ್ತಾಪಪಟ್ಟು ಆತನನ್ನು ಪುನಃ ಆರಾಧಿಸುವಂತೆ ಅವರನ್ನು ಎಚ್ಚರಿಸಲು ದೇವರು ತನ್ನ ಪ್ರವಾದಿಗಳನ್ನು ಕಳುಹಿಸಿದನು, ಆದರೆ ಅವರು ವಿಧೇಯರಾಗಲು ನಿರಾಕರಿಸಿದರು.
ಆದ್ದರಿಂದ ದೇವರು ಅವರ ಶತ್ರುಗಳು ಅವರನ್ನು ನಾಶಮಾಡುವಂತೆ ಮಾಡಿ ಎರಡೂ ರಾಜ್ಯಗಳನ್ನು ಶಿಕ್ಷಿಸಿದನು. ಅಶ್ಶೂರ್ಯರು ಅತ್ಯಂತ ಶಕ್ತಿಶಾಲಿಯಾಗಿ ಮಾರ್ಪಾಟ್ಟಂತಹ ಮತ್ತೊಂದು ಜನಾಂಗವಾಗಿತ್ತು. ಅವರು ಇತರ ಜನಾಂಗಗಳಿಗೆ ಬಹಳ ಕ್ರೂರರಾಗಿದ್ದರು. ಅವರು ಬಂದು ಇಸ್ರಾಯೇಲ್ ರಾಜ್ಯವನ್ನು ನಾಶಮಾಡಿದರು. ಅಶ್ಶೂರ್ಯರು ಇಸ್ರಾಯೇಲ್ ರಾಜ್ಯದಲ್ಲಿ ಬಹಳ ಜನರನ್ನು ಕೊಂದರು, ಅವರು ತಾವು ಬಯಸಿದ್ದೆಲ್ಲವನ್ನೂ ತೆಗೆದುಕೊಂಡು, ದೇಶದ ಬಹುಭಾಗವನ್ನು ಸುಟ್ಟುಹಾಕಿದರು.
ಅಶ್ಶೂರ್ಯರು ಎಲ್ಲಾ ನಾಯಕರನ್ನು, ಶ್ರೀಮಂತರನ್ನು ಮತ್ತು ಅಮೂಲ್ಯ ವಸ್ತುಗಳನ್ನು ಮಾಡುವಂಥ ಜನರನ್ನು ಒಟ್ಟುಗೂಡಿಸಿದರು. ಅವರು ಅವರನ್ನು ಅಶ್ಶೂರ್ಯಕ್ಕೆ ಕರೆದುಕೊಂಡು ಹೋದರು. ತುಂಬಾ ಬಡವರಾದ ಇಸ್ರಾಯೇಲ್ಯರು ಮಾತ್ರವೇ ಇಸ್ರಾಯೇಲಿನಲ್ಲಿಯೇ ಇದ್ದರು.
ಅನಂತರ ಆ ದೇಶದಲ್ಲಿ ವಾಸಿಸುವುದಕ್ಕಾಗಿ ಅಶ್ಶೂರ್ಯರು ಅನ್ಯದೇಶದವರನ್ನು ಕರೆತಂದರು. ಅನ್ಯದೇಶದವರು ಆ ಪಟ್ಟಣಗಳನ್ನು ಪುನಃ ಕಟ್ಟಿದರು. ಅವರು ಅಲ್ಲಿ ಉಳಿದಿದ್ದ ಇಸ್ರಾಯೇಲ್ಯರೊಂದಿಗೆ ಮದುವೆಯಾದರು. ಈ ಜನರ ಸಂತತಿಯವರನ್ನು ಸಮಾರ್ಯದವರು ಎಂದು ಕರೆಯಲಾಗುತ್ತದೆ.
ಅವರು ಆತನನ್ನು ನಂಬದೆ ಮತ್ತು ಆತನಿಗೆ ವಿಧೇಯರಾಗದೆ ಇದ್ದರಿಂದ ದೇವರು ಇಸ್ರಾಯೇಲ್ ರಾಜ್ಯದ ಜನರನ್ನು ಹೇಗೆ ಶಿಕ್ಷಿಸಿದನು ಎಂದು ಯೆಹೂದ್ಯ ರಾಜ್ಯದಲ್ಲಿದ್ದ ಜನರು ನೋಡಿದರು. ಆದರೂ ಅವರು ವಿಗ್ರಹಗಳನ್ನೂ, ಕಾನಾನ್ಯರ ದೇವರುಗಳನ್ನೂ ಪೂಜಿಸುತ್ತಿದ್ದರು. ದೇವರು ಅವರನ್ನು ಎಚ್ಚರಿಸಲು ಪ್ರವಾದಿಗಳನ್ನು ಕಳುಹಿಸಿದನು, ಆದರೆ ಅವರು ಕಿವಿಗೊಡಲು ನಿರಾಕರಿಸಿದರು.
ಅಶ್ಶೂರ್ಯರು ಇಸ್ರಾಯೇಲ್ ರಾಜ್ಯವನ್ನು ನಾಶಮಾಡಿ ಸುಮಾರು 100 ವರ್ಷಗಳಾದ ನಂತರ, ಯೆಹೂದ್ಯ ರಾಜ್ಯಕ್ಕೆ ಮುತ್ತಿಗೆಹಾಕಲು, ಬಾಬಿಲೋನಿಯದ ಅರಸನಾದ ನೆಬೂಕದ್ನೆಚ್ಚರನನ್ನು ದೇವರು ಕಳುಹಿಸಿದನು. ಬಾಬಿಲೋನ್ ಶಕ್ತಿಶಾಲಿಯಾದ ದೇಶವಾಗಿತ್ತು. ಯೆಹೂದ್ಯದ ಅರಸನು ನೆಬೂಕದ್ನೆಚ್ಚರನ ದಾಸನಾಗಿರಲು ಮತ್ತು ಪ್ರತಿ ವರ್ಷವೂ ಅವನಿಗೆ ಬಹಳಷ್ಟು ಹಣವನ್ನು ಕೊಡಲು ಒಪ್ಪಿಕೊಂಡನು.
ಆದರೆ ಕೆಲವು ವರ್ಷಗಳಾದ ನಂತರ ಯೆಹೂದ್ಯದ ಅರಸನು ಬಾಬಿಲೋನಿಗೆ ವಿರೋಧವಾಗಿ ತಿರುಗಿಬಿದ್ದನು. ಆದ್ದರಿಂದ, ಬಾಬಿಲೋನಿಯದವರು ಮತ್ತೆ ಬಂದು ಯೆಹೂದ್ಯ ರಾಜ್ಯವನ್ನು ಮುತ್ತಿಗೆಹಾಕಿದರು. ಅವರು ಯೆರೂಸಲೇಮ್ ಪಟ್ಟಣವನ್ನು ವಶಪಡಿಸಿಕೊಂಡರು, ದೇವಾಲಯವನ್ನು ನಾಶಮಾಡಿದರು ಮತ್ತು ಪಟ್ಟಣದ ಹಾಗೂ ದೇವಾಲಯದ ಎಲ್ಲಾ ಸಂಪತ್ತು ತೆಗೆದುಕೊಂಡು ಹೋದರು.
ತಮಗೆ ವಿರುದ್ದವಾಗಿ ತಿರುಗಿಬಿದ್ದ ಯೆಹೂದ್ಯದ ಅರಸನನ್ನು ಶಿಕ್ಷಿಸಲು, ನೆಬೂಕದ್ನೆಚ್ಚರನ ಸೈನಿಕರು ಅರಸನ ಗಂಡುಮಕ್ಕಳನ್ನು ಅವನ ಮುಂದೆಯೇ ಕೊಂದುಹಾಕಿದರು ನಂತರ ಅವನನ್ನು ಕುರುಡನನ್ನಾಗಿ ಮಾಡಿದರು. ಅದಾದನಂತರ, ಬಾಬೇಲಿನಲ್ಲಿರುವ ಸೆರೆಮನೆಯಲ್ಲಿ ಸಾಯುವಂತೆ ಅವರು ಅರಸನನ್ನು ಹಿಡಿದುಕೊಂಡು ಹೋದರು.
ನೆಬೂಕದ್ನೆಚ್ಚರನು ಮತ್ತು ಅವನ ಸೈನ್ಯವು ಯೆಹೂದ್ಯ ರಾಜ್ಯದ ಎಲ್ಲಾ ಜನರನ್ನು ಬಾಬೇಲಿಗೆ ಹಿಡಿದುಕೊಂಡು ಹೋದರು, ಹೊಲಗಳಲ್ಲಿ ವ್ಯವಸಾಯ ಮಾಡುವುದಕ್ಕಾಗಿ ಬಡಜನರನ್ನು ಮಾತ್ರ ಬಿಟ್ಟುಹೋದರು. ದೇವರ ಜನರು ವಾಗ್ದತ್ತ ದೇಶವನ್ನು ಬಿಟ್ಟುಹೋಗುವಂತೆ ಬಲತ್ಕಾರ ಮಾಡಿದ ಈ ಸಮಯಾವಧಿಯನ್ನು ಸೆರೆವಾಸ ಅಥವಾ ಗಡೀಪಾರು ಎಂದು ಕರೆಯಲಾಗುತ್ತದೆ.
ದೇವರು ಅವರನ್ನು ಸೆರೆವಾಸಕ್ಕೆ ತೆಗೆದುಕೊಂಡು ಹೋಗುವ ಮೂಲಕ ತನ್ನ ಜನರನ್ನು ಅವರ ಪಾಪಕ್ಕಾಗಿ ಶಿಕ್ಷಿಸಿದರೂ ಸಹ, ಆತನು ಅವರನ್ನಾಗಲಿ ಅಥವಾ ತನ್ನ ವಾಗ್ದಾನಗಳನ್ನಾಗಲಿ ಮರೆಯಲಿಲ್ಲ. ದೇವರು ತನ್ನ ಜನರನ್ನು ಗಮನಿಸುತ್ತಿದ್ದನು ಮತ್ತು ತನ್ನ ಪ್ರವಾದಿಗಳ ಮೂಲಕ ಅವರೊಂದಿಗೆ ಮಾತನಾಡುತ್ತಿದ್ದನು. ಅವರು ಎಪ್ಪತ್ತು ವರ್ಷಗಳಾದ ನಂತರ, ಮತ್ತೆ ವಾಗ್ದತ್ತ ದೇಶಕ್ಕೆ ಹಿಂದಿರುಗಿ ಹೋಗುವರು ಎಂದು ಆತನು ವಾಗ್ದಾನ ಮಾಡಿದನು.
ಸುಮಾರು ಎಪ್ಪತ್ತು ವರ್ಷಗಳಾದ ನಂತರ, ಪರ್ಷಿಯನ್ನರ ಅರಸನಾದ ಕೊರೇಷನು ಬಾಬಿಲೋನ್ ಸಾಮ್ರಾಜ್ಯವನ್ನು ಸೋಲಿಸಿದನು, ಆದ್ದರಿಂದ ಬಾಬಿಲೋನ್ ಸಾಮ್ರಾಜ್ಯಕ್ಕೆ ಬದಲಾಗಿ ಪರ್ಷಿಯನ್ ಸಾಮ್ರಾಜ್ಯವು ಅನೇಕ ದೇಶಗಳನ್ನು ಆಳುತ್ತಿತ್ತು. ಈ ಸಮಯದಲ್ಲಿ ಇಸ್ರಾಯೇಲ್ಯರನ್ನು ಯೆಹೂದ್ಯರು ಎಂದು ಕರೆಯಲಾಗುತ್ತಿತ್ತು. ಅವರಲ್ಲಿ ಹೆಚ್ಚಿನವರು ಬಾಬಿಲೋನಿನಲ್ಲಿ ತಮ್ಮ ಇಡೀ ಜೀವನವನ್ನು ಕಳೆದರು. ವೃದ್ಧರಾದ ಕೆಲವು ಮಂದಿ ಯೆಹೂದ್ಯರು ಮಾತ್ರವೇ ಯೆಹೂದ ದೇಶವನ್ನು ನೆನಪಿಸಿಕೊಂಡರು.
ಪರ್ಷಿಯನ್ನರು ಬಹಳ ಬಲಿಷ್ಠರಾಗಿದ್ದರು, ಆದರೆ ಅವರು ತಾವು ವಶಪಡಿಸಿಕೊಂಡ ಜನರ ಮೇಲೆ ಕರುಣೆಯುಳ್ಳವರಾಗಿದ್ದರು. ಕೊರೇಷನು ಪರ್ಷಿಯನ್ನರ ಅರಸನಾಗಿ ಸ್ವಲ್ಪ ಸಮಯವಾದ ನಂತರ, ಯೆಹೂದಕ್ಕೆ ಹಿಂದಿರುಗಿ ಹೋಗಲು ಬಯಸುವಂಥ ಯೆಹೂದ್ಯರು ಪರ್ಷಿಯಾ ದೇಶವನ್ನು ಬಿಟ್ಟು ಯೆಹೂದಕ್ಕೆ ಹಿಂದಿರುಗಿ ಹೋಗಬಹುದು ಎಂದು ಆದೇಶ ನೀಡಿದನು. ದೇವಾಲಯದ ಪುನರ್ನಿರ್ಮಾಣಕ್ಕಾಗಿ ಅವನು ಹಣವನ್ನೂ ಸಹ ಕೊಟ್ಟನು! ಆದ್ದರಿಂದ, ಸೆರೆವಾಸದ ಎಪ್ಪತ್ತು ವರ್ಷಗಳಾದ ನಂತರ ಯೆಹೂದ್ಯರ ಚಿಕ್ಕ ಗುಂಪೊಂದು ಯೆರೂಸಲೇಮಿನ ಪಟ್ಟಣಕ್ಕೆ ಹಿಂದಿರುಗಿತು.
ಜನರು ಯೆರೂಸಲೇಮಿಗೆ ಬಂದಾಗ, ಅವರು ದೇವಾಲಯವನ್ನು ಮತ್ತು ಪಟ್ಟಣದ ಸುತ್ತಲಿನ ಗೋಡೆಯನ್ನು ಪುರ್ನನಿರ್ಮಿಸಿದರು. ಪರ್ಷಿಯನ್ನರು ಇನ್ನೂ ಅವರನ್ನು ಆಳುತ್ತಿದ್ದರು, ಆದರೆ ಅವರು ಪುನಃ ವಾಗ್ದತ್ತ ದೇಶದಲ್ಲಿ ವಾಸಿಸುತ್ತಿದ್ದರು ಮತ್ತು ದೇವಾಲಯದಲ್ಲಿ ಆರಾಧಿಸುತ್ತಿದ್ದರು.