unfoldingWord 45 - ಸ್ತೆಫನನು ಮತ್ತು ಫಿಲಿಪ್ಪನು
Njelaske nganggo bentuk garis: Acts 6-8
Nomer Catetan: 1245
Basa: Kannada
Pamirsa: General
Tujuane: Evangelism; Teaching
Features: Bible Stories; Paraphrase Scripture
Status: Approved
Catetan minangka pedoman dhasar kanggo nerjemahake lan ngrekam menyang basa liya. Iki kudu dicocogake yen perlu supaya bisa dingerteni lan cocog kanggo saben budaya lan basa sing beda. Sawetara istilah lan konsep sing digunakake mbutuhake panjelasan luwih akeh utawa malah diganti utawa diilangi.
Teks catetan
ಸ್ತೆಫನನೆಂಬ ವ್ಯಕ್ತಿಯು ಆದಿ ಕ್ರೈಸ್ತ ನಾಯಕರಲ್ಲಿ ಒಬ್ಬನಾಗಿದ್ದನು. ಎಲ್ಲರು ಅವನನ್ನು ಗೌರವಿಸುತ್ತಿದ್ದರು. ಪವಿತ್ರಾತ್ಮನು ಅವನಿಗೆ ಹೆಚ್ಚು ಶಕ್ತಿಯನ್ನು ಮತ್ತು ಜ್ಞಾನವನ್ನು ದಯಪಾಲಿಸಿದನು. ಸ್ತೆಫನನು ಅನೇಕ ಅದ್ಭುತಗಳನ್ನು ಮಾಡಿದನು. ಯೇಸುವಿನಲ್ಲಿ ನಂಬಿಕೆಯಿಡುವಂತೆ ಅವನು ಅವರಿಗೆ ಬೋಧಿಸಿದಾಗ ಅನೇಕ ಜನರು ಆತನನ್ನು ನಂಬಿದರು .
ಒಂದು ದಿನ ಸ್ತೆಫನನು ಯೇಸುವಿನ ಬಗ್ಗೆ ಬೋಧಿಸುತ್ತಿದ್ದನು, ಆಗ ಯೇಸುವನ್ನು ನಂಬದ ಕೆಲವು ಮಂದಿ ಯೆಹೂದ್ಯರು ಬಂದು ಅವನ ಸಂಗಡ ತರ್ಕಮಾಡಲು ಪ್ರಾರಂಭಿಸಿದರು. ಅವರು ಬಹಳ ಕೋಪಗೊಂಡು, ಧಾರ್ಮಿಕ ಮುಖಂಡರ ಬಳಿಗೆ ಹೋಗಿ ಅವನ ಬಗ್ಗೆ ಸುಳ್ಳುಸಾಕ್ಷಿ ಹೇಳಿದರು. ಅವರು, "ಸ್ತೆಫನನು ಮೋಶೆಯ ಬಗ್ಗೆಯೂ ಮತ್ತು ದೇವರ ಬಗ್ಗೆಯೂ ತಪ್ಪಾಗಿ ಮಾತನಾಡುತ್ತಿರುವುದನ್ನು ನಾವು ಕೇಳಿದ್ದೇವೆ" ಎಂದು ಹೇಳಿದರು. ಹಾಗಾಗಿ ಧಾರ್ಮಿಕ ಮುಖಂಡರು ಸ್ತೆಫನನನ್ನು ಬಂಧಿಸಿ, ಅವನನ್ನು ಮಹಾಯಾಜಕನ ಬಳಿಗೂ ಮತ್ತು ಯೆಹೂದ್ಯರ ಇತರ ಮುಖಂಡರ ಬಳಿಗೂ ಕರೆತಂದರು. ಅನೇಕ ಸುಳ್ಳುಸಾಕ್ಷಿಗಳವರು ಮುಂದೆ ಬಂದು ಸ್ತೆಫನನ ಕುರಿತು ಸುಳ್ಳುಸಾಕ್ಷಿ ಹೇಳಿದರು.
ಮಹಾಯಾಜಕನು ಸ್ತೆಫನನಿಗೆ, "ಈ ಜನರು ನಿನ್ನ ಬಗ್ಗೆ ಸತ್ಯವನ್ನು ಹೇಳುತ್ತಿದ್ದಾರೆಯೇ?" ಎಂದು ಕೇಳಿದನು. ಮಹಾಯಾಜಕನಿಗೆ ಉತ್ತರಿಸುವ ಸಲುವಾಗಿ ಸ್ತೆಫನನು ಅನೇಕ ವಿಷಯಗಳನ್ನು ಹೇಳಲಾರಂಭಿಸಿದನು. ಅಬ್ರಹಾಮನು ಜೀವಿಸಿದ ಸಮಯದಿಂದ ಯೇಸುವಿನ ಸಮಯದವರೆಗೂ ದೇವರು ಇಸ್ರಾಯೇಲ್ ಜನರಿಗಾಗಿ ಅನೇಕ ಅದ್ಭುತವಾದ ಕಾರ್ಯಗಳನ್ನು ಮಾಡಿದ್ದಾನೆಂದು ಅವನು ಹೇಳಿದನು. ಆದರೆ ಜನರು ಯಾವಾಗಲೂ ದೇವರಿಗೆ ಅವಿಧೇಯರಾಗಿದ್ದರು. ಸ್ತೆಫನನು, "ನೀವು ಮೊಂಡರು ಮತ್ತು ದೇವರಿಗೆ ವಿರುದ್ಧವಾಗಿ ತಿರುಗಿಬಿದ್ದವರು. ನಿಮ್ಮ ಪಿತೃಗಳು ಯಾವಾಗಲೂ ದೇವರನ್ನು ತಿರಸ್ಕರಿಸಿದಂತೆಯೇ ಆತನ ಪ್ರವಾದಿಗಳನ್ನು ಕೊಂದಂತೆ ನೀವು ಯಾವಾಗಲೂ ಪವಿತ್ರಾತ್ಮನನ್ನು ತಿರಸ್ಕರಿಸುತ್ತೀರಿ ಕೊಲ್ಲಲ್ಲುತ್ತಿದ್ದೀರಿ. ಆದರೆ ನೀವು ಅವರು ಮಾಡಿದಕ್ಕಿಂತಲೂ ಹೆಚ್ಚಿನ ತಪ್ಪನ್ನು ನೀವು ಮಾಡಿದ್ದೀರಿ! ನೀವು ಮೆಸ್ಸೀಯನನ್ನು ಕೊಂದಿದ್ದೀರಿ!" ಎಂದು ಹೇಳಿದನು.
ಧಾರ್ಮಿಕ ನಾಯಕರು ಇದನ್ನು ಕೇಳಿದಾಗ, ಅವರು ಬಹಳ ಕೋಪಗೊಂಡು, ತಮ್ಮ ಕಿವಿಗಳನ್ನು ಮುಚ್ಚಿಕೊಂಡು ಜೋರಾಗಿ ಕೂಗಿದರು. ಅವರು ಸ್ತೆಫನನು ಪಟ್ಟಣದಿಂದ ಹೊರಕ್ಕೆ ಎಳೆದುಕೊಂಡು ಹೋಗಿ ಅವನನ್ನು ಕೊಲ್ಲುವುದಕ್ಕಾಗಿ ಅವನ ಮೇಲೆ ಕಲ್ಲೆಸೆದರು.
ಸ್ತೆಫನನು ಸಾಯುತ್ತಿರುವಾಗ, "ಯೇಸುವೇ, ನನ್ನಾತ್ಮವನ್ನು ಸೇರಿಸಿಕೋ" ಎಂದು ಕೂಗಿದನು. ಆಗ ಅವನು ಮೊಣಕಾಲೂರಿ, "ಕರ್ತನೇ, ಈ ಪಾಪವನ್ನು ಅವರ ಮೇಲೆ ಹೊರಿಸಬೇಡ”" ಎಂದು ಮತ್ತೊಮ್ಮೆ ಕೂಗಿದನು. ಅನಂತರ ಅವನು ಸತ್ತನು.
ಆ ದಿನದಲ್ಲಿ, ಬಹಳ ಜನರು ಯೆರೂಸಲೇಮಿನಲ್ಲಿ ಯೇಸುವಿನ ಶಿಷ್ಯರನ್ನು ಹಿಂಸಿಸಲು ಪ್ರಾರಂಭಿಸಿದರು, ಆದ್ದರಿಂದ ವಿಶ್ವಾಸಿಗಳು ಬೇರೆ ಸ್ಥಳಗಳಿಗೆ ಓಡಿಹೋದರು. ಆದರೆ ಈ ನಡುವೆಯೂ, ಅವರು ಹೋದಲ್ಲೆಲ್ಲಾ ಯೇಸುವಿನ ಬಗ್ಗೆ ಸಾರಿದರು.
ಯೇಸುವನ್ನು ನಂಬಿದ್ದ ಫಿಲಿಪ್ಪನೆಂಬ ಒಬ್ಬ ವಿಶ್ವಾಸಿಯಿದ್ದನು. ಬಹುತೇಕ ಇತರ ಎಲ್ಲಾ ವಿಶ್ವಾಸಿಗಳು ಮಾಡಿದಂತೆಯೇ ಇವನು ಸಹ ಯೆರೂಸಲೇಮಿನಿಂದ ತಪ್ಪಿಸಿಕೊಂಡು . ಸಮಾರ್ಯದ ಸೀಮೆಗೆ ಹೋದನು. ಅಲ್ಲಿ ಅವನು ಯೇಸುವಿನ ಬಗ್ಗೆ ಜನರಿಗೆ ಸಾರಿದನು. ಅನೇಕ ಜನರು ಆತನನ್ನು ನಂಬಿ ರಕ್ಷಣೆಹೊಂದಿದರು. ಒಂದು ದಿನ, ದೇವರ ಬಳಿಯಿಂದ ಒಬ್ಬ ದೇವದೂತನು ಫಿಲಿಪ್ಪನ ಬಳಿಗೆ ಬಂದು, ಅಡವಿಗೆ ಹೋಗಬೇಕು ಮತ್ತು ಅಲ್ಲಿರುವ ಒಂದು ದಾರಿಯಲ್ಲಿ ನಡೆದುಕೊಂಡು ಹೋಗಬೇಕೆಂದು ಅವನಿಗೆ ಹೇಳಿದನು. ಫಿಲಿಪ್ಪನು ಅಲ್ಲಿಗೆ ಹೋದನು. ಅವರು ದಾರಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ, ತನ್ನ ರಥದಲ್ಲಿ ಪ್ರಯಾಣ ಮಾಡುತ್ತಿದ್ದ ಒಬ್ಬ ಮನುಷ್ಯನನ್ನು ನೋಡಿದನು. ಈ ಮನುಷ್ಯನು ಇಥಿಯೋಪ್ಯದ ಪ್ರಮುಖ ಅಧಿಕಾರಿಯಾಗಿದ್ದನು. ಪವಿತ್ರಾತ್ಮನು ಫಿಲಿಪ್ಪನಿಗೆ ಈ ಮನುಷ್ಯನ ಬಳಿಗೆ ಹೋಗಿ ಮಾತನಾಡು ಎಂದು ಹೇಳಿದನು.
ಆದ್ದರಿಂದ ಫಿಲಿಪ್ಪನು ರಥದ ಬಳಿಗೆ ಹೋದನು. ಇಥಿಯೋಪ್ಯದವನು ದೇವರ ವಾಕ್ಯವನ್ನು ಓದುತ್ತಿರುವುದನ್ನು ಅವನು ಕೇಳಿಸಿಕೊಂಡನು. ಪ್ರವಾದಿಯಾದ ಯೆಶಾಯನು ಬರೆದಿರುವಂಥದ್ದನ್ನು ಅವನು ಓದುತ್ತಿದ್ದನು. ಆ ಮನುಷ್ಯನು ಓದುತ್ತಿದ್ದದು ಏನೆಂದರೆ, “ವಧಿಸುವಸ್ಥಾನಕ್ಕೆ ಒಯ್ಯಲ್ಪಡುವ ಕುರಿಮರಿಯಂತೆ ಅವರು ಆತನು ಒಯ್ಯದರು, ಕುರಿಮರಿಯು ಮೌನವಾಗಿರುವಂತೆಯೇ, ಆತನು ಸಹ ಒಂದು ಮಾತನ್ನು ಆಡಲಿಲ್ಲ. ಅವರು ಆತನಿಗೆ ಅನ್ಯಾಯವನ್ನು ಮಾಡಿದರು ಮತ್ತು ಆತನನ್ನು ಗೌರವಿಸಲಿಲ್ಲ. ಅವರು ಆತನ ಪ್ರಾಣವನ್ನು ತೆಗೆದುಬಿಟ್ಟರು."
ಫಿಲಿಪ್ಪನು ಇಥಿಯೋಪ್ಯದವನಿಗೆ, "ನೀನು ಓದುತ್ತಿರುವುದು ನಿನಗೆ ಅರ್ಥವಾಗುತ್ತಿದೆಯೋ?" ಎಂದು ಕೇಳಿದನು. ಇಥಿಯೋಪ್ಯದವನು, "ಇಲ್ಲ, ಯಾರಾದರೂ ನನಗೆ ಅರ್ಥ ತಿಳಿಸಿಕೊಡದ ಹೊರತು ಅದು ನನಗೆ ಅರ್ಥವಾಗುವುದಿಲ್ಲ. ದಯವಿಟ್ಟು ನನ್ನ ಬಳಿಯಲ್ಲಿ ಬಂದು ಕುಳಿತುಕೋ. ಯೆಶಾಯನು ಯಾರ ಕುರಿತು ಬರೆದಿದ್ದಾನೆ, ತನ್ನ ಕುರಿತೋ ಅಥವಾ ಮತ್ತೊಬ್ಬನ ಕುರಿತೋ?” ಎಂದು ಹೇಳಿದನು.
ಫಿಲಿಪ್ಪನು ರಥವನ್ನೇರಿ ಕುಳಿತುಕೊಂಡನು. ಆಗ ಅವನು ಇಥಿಯೋಪ್ಯದ ಮನುಷ್ಯನಿಗೆ ಯೆಶಾಯನು ಯೇಸುವಿನ ಬಗ್ಗೆ ಬರೆದಿದ್ದಾನೆ ಎಂದು ಹೇಳಿದನು. ಫಿಲಿಪ್ಪನು ದೇವರ ವಾಕ್ಯದ ಇತರ ಭಾಗಗಳ ಕುರಿತಾಗಿಯೂ ಸಹ ಮಾತನಾಡಿದನು. ಈ ರೀತಿಯಾಗಿ, ಅವನು ಆ ಮನುಷ್ಯನಿಗೆ ಯೇಸುವಿನ ಸುವಾರ್ತೆಯನ್ನು ಹೇಳಿದನು.
ಫಿಲಿಪ್ಪನು ಮತ್ತು ಇಥಿಯೋಪ್ಯದವನು ಪ್ರಯಾಣ ಮಾಡಿಕೊಂಡು ಬರುತ್ತಿರುವಾಗ, ಅವರು ನೀರಿರುವ ಜಾಗಕ್ಕೆ ಬಂದರು. ಇಥಿಯೋಪ್ಯದವನು, "ಆಗೋ! ಇಲ್ಲಿ ನೀರಿದೆ ನನಗೆ ದೀಕ್ಷಾಸ್ನಾನ ಮಾಡಿಸಬಹುದೇ?" ಎಂದು ಕೇಳಿದನು. ಅವನು ಸಾರಥಿಗೆ ರಥವನ್ನು ನಿಲ್ಲಿಸಲು ಹೇಳಿದನು.
ಅವರು ನೀರಿನೊಳಗೆ ಇಳಿದರು ಮತ್ತು ಫಿಲಿಪ್ಪನು ಇಥಿಯೋಪ್ಯದವನಿಗೆ ದೀಕ್ಷಾಸ್ನಾನ ಮಾಡಿಸಿದನು. ಅವರು ನೀರನ್ನು ಬಿಟ್ಟು ಮೇಲಕ್ಕೆ ಬಂದ ನಂತರ, ತಕ್ಷಣವೇ ಪವಿತ್ರಾತ್ಮನು ಫಿಲಿಪ್ಪನನ್ನು ಇನ್ನೊಂದು ಸ್ಥಳಕ್ಕೆ ಎತ್ತಿಕೊಂಡು ಹೋದನು. ಅಲ್ಲಿ ಫಿಲಿಪ್ಪನು ಯೇಸುವಿನ ಕುರಿತು ಜನರಿಗೆ ಹೇಳುವುದನ್ನು ಮುಂದುವರಿಸಿದನು.
ಇಥಿಯೋಪ್ಯದವನು ತನ್ನ ಮನೆಯ ಕಡೆಗೆ ಹೋಗಲು ಪ್ರಯಾಣವನ್ನು ಮುಂದುವರಿಸಿದನು. ಅವನು ಯೇಸುವನ್ನು ತಿಳಿದುಕೊಂಡಿದ್ದರಿಂದ ಅವನು ಸಂತೋಷವುಳ್ಳವನಾದನು.