unfoldingWord 19 - ಪ್ರವಾದಿಗಳು
Schema: 1 Kings 16-18; 2 Kings 5; Jeremiah 38
Numero di Sceneggiatura: 1219
Lingua: Kannada
Pubblico: General
Genere: Bible Stories & Teac
Scopo: Evangelism; Teaching
Citazione Biblica: Paraphrase
Stato: Approved
Gli script sono linee guida di base per la traduzione e la registrazione in altre lingue. Dovrebbero essere adattati come necessario per renderli comprensibili e pertinenti per ogni diversa cultura e lingua. Alcuni termini e concetti utilizzati potrebbero richiedere ulteriori spiegazioni o addirittura essere sostituiti o omessi completamente.
Testo della Sceneggiatura
ದೇವರು ಇಸ್ರಾಯೇಲ್ಯರ ಬಳಿಗೆ ಯಾವಾಗಲೂ ಪ್ರವಾದಿಗಳನ್ನು ಕಳುಹಿಸುತ್ತಿದ್ದನು. ಪ್ರವಾದಿಗಳು ದೇವರಿಂದ ಕೇಳಿಸಿಕೊಂಡಂಥ ಸಂದೇಶಗಳನ್ನು ಜನರಿಗೆ ಹೇಳುತ್ತಿದ್ದರು.
ಅಹಾಬನು ಇಸ್ರಾಯೇಲ್ ರಾಜ್ಯದ ಅರಸನಾಗಿದ್ದಾಗ ಎಲೀಯನು ಪ್ರವಾದಿಯಾಗಿದ್ದನು. ಅಹಾಬನು ದುಷ್ಟ ಮನುಷ್ಯನಾಗಿದ್ದನು. ಜನರು ಬಾಳ್ ಎಂಬ ಸುಳ್ಳು ದೇವರನ್ನು ಆರಾಧಿಸುವಂತೆ ಮಾಡಲು ಅವನು ಪ್ರಯತ್ನಿಸಿದನು. ಆದ್ದರಿಂದ ದೇವರು ಜನರನ್ನು ಶಿಕ್ಷಿಸುವನೆಂದು ಎಲೀಯನು ಅರಸನಾದ ಅಹಾಬನಿಗೆ ಹೇಳಿದನು. ಆತನು , “ನಾನು ತಿರುಗಿ ಮಳೆ ಬರಲಿ ಅನ್ನುವವರೆಗೂ ಇಸ್ರಾಯೇಲ್ ರಾಜ್ಯದಲ್ಲಿ ಮಳೆಯಾಗಲಿ ಮಂಜಾಗಲಿ ಇರುವುದಿಲ್ಲ” ಎಂದು ಅವನಿಗೆ ಹೇಳಿದನು. ಇದರಿಂದ ಅಹಾಬನು ತುಂಬಾ ಕೋಪಗೊಂಡು ಎಲೀಯನನ್ನು ಕೊಲ್ಲಬೇಕೆಂದು ನಿರ್ಧರಿಸಿದನು.
ಅಹಾಬನಿಗೆ ಕಾಣದಂತೆ ಅಡಗಿಕೊಳ್ಳಲು ಅರಣ್ಯಕ್ಕೆ ಹೋಗು ಎಂದು ದೇವರು ಎಲೀಯನಿಗೆ ಹೇಳಿದನು. ಎಲೀಯನು ಅರಣ್ಯಕ್ಕೆ ಹೋಗಿ, ದೇವರು ಅವನಿಗೆ ಆಜ್ಞಾಪಿಸಿದ ಒಂದು ನಿರ್ದಿಷ್ಟವಾದ ಹಳ್ಳಕ್ಕೆ ಹೋದನು. ಪ್ರತಿಯೊಂದು ಮುಂಜಾನೆಯು ಮತ್ತು ಸಂಜೆಯು, ಪಕ್ಷಿಗಳು ಎಲೀಯನಿಗೆ ರೊಟ್ಟಿ ಮತ್ತು ಮಾಂಸ ತಂದುಕೊಡುತ್ತಿದ್ದವು. ಈ ಸಮಯದಲ್ಲಿ, ಅಹಾಬನೂ ಅವನ ಸೈನ್ಯವೂ ಎಲೀಯನನ್ನು ಹುಡುಕುತ್ತಿದ್ದರು, ಆದರೆ ಅವರಿಗೆ ಅವನು ಕಂಡುಹಿಡಿಯಲಾಗಲಿಲ್ಲ.
ಮಳೆಯಿಲ್ಲದ್ದರಿಂದ ಸ್ವಲ್ಪ ಸಮಯವಾದ ನಂತರ ಹಳ್ಳವು ಬತ್ತಿಹೋಯಿತು. ಆದಕಾರಣ ಎಲೀಯನು ಹತ್ತಿರವಿದ್ದ ಬೇರೊಂದು ದೇಶಕ್ಕೆ ಹೋದನು. ಆ ದೇಶದಲ್ಲಿ ಒಬ್ಬ ಬಡ ವಿಧವೆಯಿದ್ದಳು. ಅವಳಿಗೆ ಒಬ್ಬ ಮಗನಿದ್ದನು. ಕೊಯ್ಲು ಇಲ್ಲದ್ದರಿಂದ ಅವರ ಆಹಾರವು ಬಹುತೇಕ ಮುಗಿಯುತ್ತಾ ಬಂದಿತ್ತು. ಆದರೂ ಆ ಸ್ತ್ರೀಯು ಎಲೀಯನನ್ನು ಪೋಷಿಸಿದ್ದಳು, ಆದ್ದರಿಂದ ದೇವರು ಅವಳಿಗೂ ಮತ್ತು ಅವಳ ಮಗನಿಗೂ ಒದಗಿಸಿಕೊಟ್ಟನು, ಇದರಿಂದಾಗಿ ಅವಳ ಹಿಟ್ಟಿನ ಮಡಿಕೆಯು, ಎಣ್ಣೆಯ ಕುಡಿಕೆಯು ಖಾಲಿಯಾಗಲಿಲ್ಲ. ಇಡೀ ಕ್ಷಾಮ ಕಾಲದಲ್ಲೆಲ್ಲಾ ಅವರಿಗೆ ಆಹಾರವಿತ್ತು. ಎಲೀಯನು ಹಲವಾರು ವರ್ಷಗಳು ಅಲ್ಲಿಯೇ ತಂಗಿದ್ದನು.
ಮೂರುವರೆ ವರ್ಷಗಳ ನಂತರ, ದೇವರು ತಾನು ಮತ್ತೇ ಮಳೆ ಬರುವಂತೆ ಮಾಡುವೆನು ಎಂದು ಎಲೀಯನಿಗೆ ಹೇಳಿದನು. ಇಸ್ರಾಯೇಲ್ ರಾಜ್ಯಕ್ಕೆ ಹಿಂದಿರುಗಿ ಹೋಗಿ ಅಹಾಬನೊಂದಿಗೆ ಮಾತನಾಡಬೇಕೆಂದು ಆತನು ಎಲೀಯನಿಗೆ ಹೇಳಿದನು. ಆದ್ದರಿಂದ ಎಲೀಯನು ಅಹಾಬನ ಬಳಿಗೆ ಹೋದನು. ಅಹಾಬನು ಅವನನ್ನು ನೋಡಿದಾಗ, ಅವನಿಗೆ, "ಆಪತ್ತನ್ನು ಬರಮಾಡಿದವನೇ, ನೀನು ಇಲ್ಲಿರುವೆಯಾ !" ಎಂದು ಹೇಳಿದನು. ಎಲೀಯನು ಅವನಿಗೆ, “ಆಪತ್ತನ್ನು ಬರಮಾಡಿದವನು ನೀನೇ, ನೀನು ಯೆಹೋವನನ್ನು ತೊರೆದುಬಿಟ್ಟಿದ್ದೀ. ಆತನು ನಿಜವಾದ ದೇವರಾಗಿದ್ದಾನೆ, ಆದರೆ ನೀನು ಬಾಳನನ್ನು ಆರಾಧಿಸುತ್ತಿರುವಿ , ಈಗ ನೀನು ಇಸ್ರಾಯೇಲ್ ರಾಜ್ಯದ ಜನರೆಲ್ಲರನ್ನು ಕರ್ಮೆಲ್ ಬೆಟ್ಟಕ್ಕೆ ಕರೆತರಿಸಬೇಕು" ಎಂದು ಉತ್ತರಿಸಿದನು.
ಆದ್ದರಿಂದ ಇಸ್ರಾಯೇಲ್ ಜನರೆಲ್ಲರು ಕರ್ಮೆಲ್ ಬೆಟ್ಟಕ್ಕೆ ಹೋದರು. ತಾವು ಬಾಳನಿಗಾಗಿ ಸಂದೇಶಗಳನ್ನು ನುಡಿದಂಥವರು ಎಂದು ಹೇಳಿದ ಮನುಷ್ಯರು ಕೂಡಾ ಬಂದರು. ಇವು ಬಾಳನ ಪ್ರವಾದಿಗಳು. ಅವರು 450 ಮಂದಿಯಿದ್ದರು. ಎಲೀಯನು ಜನರಿಗೆ, "ನೀವು ಎಷ್ಟರವರೆಗೆ ಮನಸ್ಸನ್ನು ಬದಲಿಸಿಕೊಳ್ಳುತ್ತಿರುವಿರಿ? ಯೆಹೋವನು ದೇವರಾಗಿದ್ದರೆ ಆತನನ್ನೇ ಆರಾಧಿಸಿರಿ! ಬಾಳನು ದೇವರಾಗಿದ್ದರೆ ಅವನನ್ನೇ ಆರಾಧಿಸಿರಿ!" ಎಂದು ಹೇಳಿದನು.
ಆಗ ಎಲೀಯನು ಬಾಳನ ಪ್ರವಾದಿಗಳಿಗೆ, “ಒಂದು ಹೋರಿಯನ್ನು ವಧಿಸಿ ಅದನ್ನು ಯಜ್ಞವಾಗಿ ಅರ್ಪಿಸಲು ಮಾಂಸವನ್ನು ಯಜ್ಞವೇದಿಯ ಮೇಲಿಡಿರಿ, ಆದರೆ ಬೆಂಕಿಯನ್ನು ಹೊತ್ತಿಸಬಾರದು. ತರುವಾಯ ನಾನೂ ಹಾಗೆಯೇ ಮಾಡುವೆನು ಮತ್ತು ನಾನು ಮಾಂಸವನ್ನು ಬೇರೆ ಯಜ್ಞವೇದಿಯ ಮೇಲಿಡುವೆನು. ಆಗ ದೇವರು ಯಜ್ಞವೇದಿಯ ಮೇಲೆ ಬೆಂಕಿಯನ್ನು ಕಳುಹಿಸಿದರೆ, ಅವನು ನಿಜವಾದ ದೇವರು ಎಂದು ನೀವು ತಿಳಿಯುವಿರಿ" ಎಂದು ಹೇಳಿದನು. ಆದ್ದರಿಂದ ಬಾಳನ ಪ್ರವಾದಿಗಳು ಯಜ್ಞವನ್ನು ಸಿದ್ಧಪಡಿಸಿದರು ಆದರೆ ಬೆಂಕಿಯನ್ನು ಹೊತ್ತಿಸಲಿಲ್ಲ.
ಅನಂತರ ಬಾಳನ ಪ್ರವಾದಿಗಳು ಬಾಳನಿಗೆ, “ಬಾಳನೇ, ನಮಗೆ ಕಿವಿಗೊಡು!” ಎಂದು ಪ್ರಾರ್ಥಿಸಿದರು. ಅವರು ಇಡೀ ದಿನವೆಲ್ಲಾ ಪ್ರಾರ್ಥಿಸಿದರು ಹಾಗೂ ಕೂಗಿದರು ಮತ್ತು ತಮ್ಮ ದೇಹವನ್ನು ಕತ್ತಿಯಿಂದ ಕತ್ತರಿಸಿಕೊಂಡರು, ಆದರೆ ಬಾಳನು ಉತ್ತರಿಸಲ್ಲೂ ಇಲ್ಲ, ಅವನು ಬೆಂಕಿಯನ್ನು ಕಳುಹಿಸಲ್ಲೂ ಇಲ್ಲ.
ಬಾಳನ ಪ್ರವಾದಿಗಳು ಬಾಳನಿಗೆ ಪ್ರಾರ್ಥಿಸುತ್ತಾ ಇಡೀ ದಿನವನ್ನೆಲ್ಲಾ ಕಳೆದರು. ಅವರು ಅಂತಿಮವಾಗಿ ಪ್ರಾರ್ಥಿಸುವುದನ್ನು ನಿಲ್ಲಿಸಿದರು. ಆಗ ಎಲೀಯನು ದೇವರಿಗಾಗಿ ಬೇರೊಂದು ಹೋರಿಯ ಮಾಂಸವನ್ನು ಯಜ್ಞವೇದಿಯ ಮೇಲಿಟ್ಟನು. ಅನಂತರ, ಅವನು ಮಾಂಸ, ಕಟ್ಟಿಗೆ, ಮತ್ತು ಯಜ್ಞವೇದಿಯ ಸುತ್ತಲಿರುವ ನೆಲವು ಸಂಪೂರ್ಣವಾಗಿ ನೆನೆಯುವ ವರೆಗೂ ಹನ್ನೆರಡು ದೊಡ್ಡ ಕೊಡಗಳ ನೀರನ್ನು ಯಜ್ಞದ ಮೇಲೆ ಸುರಿಯಿರಿ ಎಂದು ಜನರಿಗೆ ಹೇಳಿದನು.
ಆಗ ಎಲೀಯನು, "ಅಬ್ರಹಾಮ, ಇಸಾಕ, ಯಾಕೋಬರ ದೇವರೇ, ಯೆಹೋವನೇ, ನೀನೊಬ್ಬನೇ ಇಸ್ರಾಯೇಲರ ದೇವರಾಗಿರುತ್ತೀ ಮತ್ತು ನಾನು ನಿನ್ನ ಸೇವಕನಾಗಿರುತ್ತೇನೆ ಎಂಬುದನ್ನೂ ತೋರಿಸು. ಈ ಜನರು ನೀನೇ ನಿಜವಾದ ದೇವರು ಎಂದು ತಿಳಿದುಕೊಳ್ಳುವಂತೆ ನೀನು ನನಗೆ ಉತ್ತರವನ್ನು ದಯಪಾಲಿಸು" ಎಂದು ಪ್ರಾರ್ಥಿಸಿದನು.
ಕೂಡಲೇ, ಆಕಾಶದಿಂದ ಬೆಂಕಿ ಬಿದ್ದಿತು. ಅದು ಯಜ್ಞಮಾಂಸವನ್ನೂ, ಕಟ್ಟಿಗೆ, ಕಲ್ಲು ಮಣ್ಣುಗಳನ್ನೂ ದಹಿಸಿಬಿಟ್ಟು ಕಾಲುವೆಯಲ್ಲಿದ್ದ ನೀರನ್ನೆಲ್ಲಾ ಹೀರಿಬಿಟ್ಟಿತು. ಜನರು ಇದನ್ನು ನೋಡಿದಾಗ ಅವರು ನೆಲಕ್ಕೆ ಬೋರ್ಲಬಿದ್ದು, "ಯೆಹೋವನೇ ದೇವರು! ಯೆಹೋವನೇ ದೇವರು!" ಎಂದು ಹೇಳಿದರು.
ಆಗ ಎಲೀಯನು, "ಬಾಳನ ಪ್ರವಾದಿಗಳಲ್ಲಿ ಒಬ್ಬನೂ ತಪ್ಪಿಸಿಕೊಳ್ಳಲು ಬಿಡಬೇಡಿರಿ" ಎಂದು ಹೇಳಿದನು. ಆದ್ದರಿಂದ ಜನರು ಬಾಳನ ಪ್ರವಾದಿಗಳನ್ನು ಹಿಡಿದು ಅವರನ್ನು ಅಲ್ಲಿಂದ ಕರೆದುಕೊಂಡು ಹೋಗಿ ಕೊಂದುಹಾಕಿದರು.
ಆಗ ಎಲೀಯನು ಅರಸನಾದ ಅಹಾಬನಿಗೆ, "ತಥಟ್ಟನೆ ನೀನು ಮನೆಗೆ ಹಿಂತಿರುಗು, ದಾರಕರವಾದ ಮಳೆ ಬರಲಿದೆ" ಎಂದು ಹೇಳಿದನು. ಕೂಡಲೇ ಆಕಾಶವು ಕಪ್ಪಾಗಿ ದೊಡ್ಡ ಮಳೆಯು ಪ್ರಾರಂಭವಾಯಿತು. ಯೆಹೋವನು ಬರಗಾಲವನ್ನು ಹೀಗೆ ನಿಯಂತ್ರಿಸಿ ಈ ಮೂಲಕವಾಗಿ ತಾನೇ ನಿಜವಾದ ದೇವರು ಎಂದು ತೋರಿಸಿಕೊಟ್ಟನು
ಎಲೀಯನು ತನ್ನ ಕೆಲಸವನ್ನು ಪೂರ್ಣಗೊಳಿಸಿದಾಗ, ದೇವರು ಎಲೀಷನೆಂಬ ಮನುಷ್ಯನನ್ನು ತನ್ನ ಪ್ರವಾದಿಯನ್ನಾಗಿ ಆರಿಸಿಕೊಂಡನು. ದೇವರು ಎಲೀಷನ ಮೂಲಕ ಅನೇಕ ಅದ್ಭುತಗಳನ್ನು ಮಾಡಿದನು. ಆ ಅದ್ಭುತಗಳಲ್ಲಿ ಒಂದು ನಾಮಾನನ ಜೀವನದಲ್ಲಿ ಸಂಭವಿಸಿತು. ಅವನು ಶತ್ರು ಸೈನ್ಯದ ಸೇನಾಧಿಪತಿಯಾಗಿದ್ದನು, ಆದರೆ ಅವನಿಗೆ ಭೀಕರ ಚರ್ಮರೋಗವಿತ್ತು. ನಾಮಾನನು ಎಲೀಷನ ಕುರಿತು ಕೇಳಿಸಿಕೊಂಡಿದ್ದರಿಂದ ಅವನು ಎಲೀಷನ ಬಳಿಗೆ ಹೋಗಿ ತನ್ನನ್ನು ಸ್ವಸ್ಥಮಾಡಬೇಕೆಂದು ಆತನನ್ನು ಬೇಡಿಕೊಂಡನು. ಎಲೀಷನು ನಾಮಾನನಿಗೆ ಯೊರ್ದನ್ ನದಿಗೆ ಹೋಗಿ ಆ ನೀರಿನಲ್ಲಿ ಏಳು ಬಾರಿ ಮುಳುಗು ಎಂದು ಹೇಳಿದನು.
ನಾಮಾನನು ಕೋಪಗೊಂಡನು. ಅವನು ಅದನ್ನು ಮಾಡಲು ನಿರಾಕರಿಸಿದನು, ಏಕೆಂದರೆ ಇದು ಅವನಿಗೆ ಮೂರ್ಖತನವಾಗಿ ತೋರಿತ್ತು. ಆದರೆ ತರುವಾಯ ಅವನು ತನ್ನ ಮನಸ್ಸನ್ನು ಬದಲಾಯಿಸಿಕೊಂಡನು. ಅವನು ಯೊರ್ದನ್ ನದಿಗೆ ಹೋಗಿ ಏಳು ಸಾರಿ ಆ ನೀರಿನಲ್ಲಿ ಮುಳುಗಿದನು. ಅವನು ಕೊನೆಯ ಬಾರಿಗೆ ನೀರಿನಲ್ಲಿ ಮುಳುಗಿ ಹೊರಗೆ ಬಂದಾಗ ದೇವರು ಅವನನ್ನು ಸ್ವಸ್ಥ ಮಾಡಿದನು.
ದೇವರು ಇತರ ಅನೇಕ ಪ್ರವಾದಿಗಳನ್ನು ಸಹ ಇಸ್ರಾಯೇಲ್ ಜನರ ಬಳಿಗೆ ಕಳುಹಿಸಿದನು. ವಿಗ್ರಹಗಳನ್ನು ಆರಾಧಿಸುವುದನ್ನು ನಿಲ್ಲಿಸುವಂತೆ ಅವರೆಲ್ಲರೂ ಜನರಿಗೆ ಹೇಳಿದರು. ಇದಕ್ಕೆ ಬದಲಾಗಿ ಅವರು ಪರಸ್ಪರ ಒಬ್ಬರಿಗೊಬ್ಬರು ನ್ಯಾಯಯುತವಾಗಿ ವರ್ತಿಸಬೇಕು ಮತ್ತು ಒಬ್ಬರಿಗೊಬ್ಬರು ಕರುಣೆಯನ್ನು ತೋರಿಸಬೇಕು ಎಂದು ತಿಳಿಸಿದರು. ಅದು ಮಾತ್ರವಲ್ಲದೆ ಆ ಪ್ರವಾದಿಗಳು ಜನರಿಗೆ “ಕೆಟ್ಟದ್ದನ್ನು ಮಾಡುವುದನ್ನು ನಿಲ್ಲಿಸಬೇಕು ಮತ್ತು ಅದಕ್ಕೆ ಬದಲಾಗಿ ದೇವರಿಗೆ ವಿಧೇಯರಾಗಬೇಕು” ಎಂದು ಎಚ್ಚರಿಕೆ ಕೊಟ್ಟರು. ಜನರು ಇದನ್ನು ಮಾಡದಿದ್ದರೆ, ದೇವರು ಅವರನ್ನು ತಪ್ಪಿತಸ್ಥರೆಂದು ನಿರ್ಣಯಿಸಿ, ಆತನು ಅವರನ್ನು ಶಿಕ್ಷಿಸುವನು ಎಂದು ಅವರಿಗೆ ತಿಳಿಸಲಾಗಿತ್ತು.
ಅನೇಕ ಬಾರಿ ಜನರು ದೇವರಿಗೆ ವಿಧೇಯರಾಗಲಿಲ್ಲ. ಅವರು ಅನೇಕವೇಳೆ ಪ್ರವಾದಿಗಳನ್ನು ಹಿಂಸೆಪಡಿಸಿದ್ದರು ಮತ್ತು ಕೆಲವೊಮ್ಮೆ ಅವರನ್ನು ಕೊಂದುಹಾಕಿದರು. ಒಮ್ಮೆ ಅವರು ಪ್ರವಾದಿಯಾದ ಯೆರೆಮೀಯನನ್ನು ಒಣ ಬಾವಿಗೆ ಹಾಕಿ ಸಾಯುವಂತೆ ಅವನನ್ನು ಅಲ್ಲಿಯೇ ಬಿಟ್ಟುಬಿಟ್ಟರು. ಅವನು ಬಾವಿಯ ಕೆಳಭಾಗದಲ್ಲಿರುವ ಕೆಸರಿನೊಳಗೆ ಸಿಕ್ಕಿಕೊಂಡನು. ಆದರೆ ಅರಸನು ಅವನ ಮೇಲೆ ಕರುಣೆಯನ್ನು ತೋರಿ, ಅವನು ಸಾಯುವುದಕ್ಕಿಂತ ಮುಂಚೆ ಯೆರೆಮೀಯನನ್ನು ಬಾವಿಯಿಂದ ಎತ್ತುವಂತೆ ತನ್ನ ಸೇವಕರಿಗೆ ಆಜ್ಞಾಪಿಸಿದನು.
ಜನರು ಅವರನ್ನು ದ್ವೇಷಿಸುತ್ತಿದ್ದರೂ ಸಹ ಪ್ರವಾದಿಗಳು ದೇವರಿಗಾಗಿ ಮಾತನಾಡುತ್ತಿದ್ದರು. ಪಶ್ಚಾತ್ತಾಪ ಪಡದಿದ್ದರೆ ದೇವರು ಅವರನ್ನು ನಾಶಮಾಡುವನೆಂದು ಅವರು ಜನರನ್ನು ಎಚ್ಚರಿಸಿದರು. ದೇವರು ಮೆಸ್ಸೀಯನನ್ನು ಕಳುಹಿಸುವುದಾಗಿ ವಾಗ್ದಾನ ಮಾಡಿದ್ದಾನೆಂದು ಅವರು ಜನರಿಗೆ ನೆನಪಿಸಿದರು.