unfoldingWord 50 - ಹಿಂದಿರುಗಿ ಬರಲಿರುವ ಯೇಸು
Útlínur: Matthew 13:24-42; 22:13; 24:14; 28:18; John 4:35; 15:20; 16:33; 1 Thessalonians 4:13-5:11; James 1:12; Revelation 2:10; 20:10; 21-22
Handritsnúmer: 1250
Tungumál: Kannada
Áhorfendur: General
Tegund: Bible Stories & Teac
Tilgangur: Evangelism; Teaching
Biblíutilvitnun: Paraphrase
Staða: Approved
Forskriftir eru grunnleiðbeiningar fyrir þýðingar og upptökur á önnur tungumál. Þau ættu að vera aðlöguð eftir þörfum til að gera þau skiljanleg og viðeigandi fyrir hverja menningu og tungumál. Sum hugtök og hugtök sem notuð eru gætu þurft frekari skýringar eða jafnvel skipt út eða sleppt alveg.
Handritstexti
ಸುಮಾರು 2,000 ವರ್ಷಗಳಿಂದ, ಲೋಕದಾದ್ಯಂತ ಅನೇಕಾನೇಕ ಜನರು ಮೆಸ್ಸೀಯನಾಗಿರುವ ಯೇಸುವಿನ ಸುವಾರ್ತೆಯನ್ನು ಕೇಳುತ್ತಿದ್ದಾರೆ. ಸಭೆಯು ಬೆಳೆಯುತ್ತಿದೆ. ಯೇಸು ತಾನು ಲೋಕದ ಅಂತ್ಯದಲ್ಲಿ ಹಿಂದಿರುಗಿ ಬರುವೆನು ಎಂದು ವಾಗ್ದಾನ ಮಾಡಿದ್ದಾನೆ. ಆತನು ಇನ್ನೂ ಹಿಂದಿರುಗಿ ಬರಲಿಲ್ಲವಾದರೂ ಕೂಡ, ಆತನು ತನ್ನ ವಾಗ್ದಾನವನ್ನು ನೆರವೇರಿಸುತ್ತಾನೆ .
ಯೇಸುವಿನ ಬರೋಣವನ್ನು ಎದುರುನೋಡುತ್ತಿರುವ ನಾವು ಪರಿಶುದ್ಧರಾಗಿ ಮತ್ತು ಆತನನ್ನು ಗೌರವಿಸುವವರಾಗಿ ಜೀವಿಸಬೇಕೆಂದು ದೇವರು ಬಯಸುತ್ತಾನೆ. ನಾವು ಆತನ ರಾಜ್ಯದ ಕುರಿತು ಇತರರಿಗೆ ಹೇಳಬೇಕೆಂದು ಸಹ ಆತನು ಅಪೇಕ್ಷಿಸುತ್ತಾನೆ. ಯೇಸು ಇ ಲೋಕದಲ್ಲಿ ಜೀವಿಸುತ್ತಿದ್ದಾಗ, "ನನ್ನ ಶಿಷ್ಯರು ದೇವರ ರಾಜ್ಯದ ಕುರಿತಾದ ಶುಭವಾರ್ತೆಯನ್ನು ಲೋಕದ ಎಲ್ಲೆಡೆಯಿರುವ ಜನರಿಗೆ ಸಾರುತ್ತಾರೆ, ಆಗ ಅಂತ್ಯವು ಬರುತ್ತದೆ" ಎಂದು ಹೇಳಿದನು.
ಇನ್ನೂ ಅನೇಕ ಜನರು ಯೇಸುವಿನ ಕುರಿತಾಗಿ ಕೇಳಿಸಿಕೊಂಡಿಲ್ಲ . ಯೇಸು ಸ್ವರ್ಗಕ್ಕೆ ಹಿಂದಿರುಗಿ ಹೋಗುವ ಮುಂಚೆ ಆತನು ಕ್ರೈಸ್ತರಿಗೆ ‘ಶುಭವಾರ್ತೆಯನ್ನು ಅರಿಯದ ಜನರಿಗೆ ಶುಭವಾರ್ತೆಯನ್ನು ಸಾರಿರಿ’ ಎಂದು ಹೇಳಿದನು. ಆತನು, "ನೀವು ಹೋಗಿ, ಎಲ್ಲಾ ಜನರನ್ನು ಶಿಷ್ಯರನ್ನಾಗಿ ಮಾಡಿರಿ!" ಮತ್ತು "ಹೊಲಗಳು ಕೊಯ್ಲಿಗೆ ಬಂದಿವೆ!" ಎಂದು ಹೇಳಿದನು.
ಯೇಸು, "ದಾಸನು ತನ್ನ ಯಜಮಾನನಿಗಿಂತ ದೊಡ್ಡವನಲ್ಲ. ಈ ಲೋಕದ ಪ್ರಮುಖ ಜನರು ನನ್ನನ್ನು ದ್ವೇಷಿಸಿದ್ದಾರೆ, ಅವರು ನಿಮ್ಮನ್ನು ಹಿಂಸಿಸುವರು ಮತ್ತು ನನ್ನ ನಿಮಿತ್ತವಾಗಿ ನಿಮ್ಮನ್ನು ಕೊಲ್ಲುವರು. ಈ ಲೋಕದಲ್ಲಿ ನೀವು ಸಂಕಷ್ಟವನ್ನುಭವಿಸುತ್ತೀರಿ, ಆದರೆ ಧೈರ್ಯವಾಗಿರಿ ಏಕೆಂದರೆ ಈ ಲೋಕವನ್ನು ಆಳುವ ಸೈತಾನನನ್ನು ನಾನು ಸೋಲಿಸಿದ್ದೇನೆ. ನೀವು ಕಡೇವರೆಗೂ ನನಗೆ ನಂಬಿಗಸ್ತರಾಗಿದ್ದರೆ ದೇವರು ನಿಮ್ಮನ್ನು ರಕ್ಷಿಸುತ್ತಾನೆ!" ಎಂದು ಹೇಳಿದನು.
ಲೋಕವು ಅಂತ್ಯವಾಗುವಾಗ ಜನರಿಗೆ ಏನೆಲ್ಲಾ ಸಂಭವಿಸುತ್ತದೆಂದು ವಿವರಿಸಲು ಯೇಸು ತನ್ನ ಶಿಷ್ಯರಿಗೆ ಒಂದು ಕಥೆಯನ್ನು ಹೇಳಿದನು. ಆತನು ಹೇಳಿದ್ದೇನಂದರೆ, “ಒಬ್ಬ ಮನುಷ್ಯನು ತನ್ನ ಹೊಲದಲ್ಲಿ ಒಳ್ಳೆಯ ಬೀಜವನ್ನು ಬಿತ್ತಿದನು. ಅವನು ಮಲಗಿದ್ದಾಗ ಅವನ ಶತ್ರು ಬಂದು ಗೋಧಿ ಬೀಜಗಳ ನಡುವೆ ಕಳೆಯ ಬೀಜಗಳನ್ನು ಬಿತ್ತಿ ಹೊರಟುಹೋದನು.”
"ಸಸ್ಯಗಳು ಮೊಳಕೆಯೊಡೆದು ಬಂದಾಗ, ಆ ಮನುಷ್ಯನ ಸೇವಕರು, 'ಯಜಮಾನನೇ, ನೀನು ಆ ಹೊಲದಲ್ಲಿ ಒಳ್ಳೆಯ ಬೀಜವನ್ನು ಬಿತ್ತಿದ್ದಿ. ಆದರೆ ಅದರಲ್ಲಿ ಕಳೆಗಳು ಏಕಿವೆ?' ಆ ಮನುಷ್ಯನು, 'ನನ್ನ ಶತ್ರುಗಳು ಮಾತ್ರವೇ ಅವುಗಳನ್ನು ಬಿತ್ತಲು ಬಯಸುತ್ತಾರೆ, ಇದು ನನ್ನ ಶತ್ರುಗಳಲ್ಲಿ ಒಬ್ಬರ ಕೆಲಸವಾಗಿದೆ.'"
"ಸೇವಕರು ತಮ್ಮ ಯಜಮಾನನಿಗೆ, 'ನಾವು ಕಳೆಗಳನ್ನು ಕಿತ್ತುಹಾಕಲೇ?' ಎಂದು ಕೇಳಿದರು. ಯಜಮಾನನು, 'ಬೇಡ, ನೀವು ಹಾಗೇ ಮಾಡುವಾಗ ನೀವು ಗೋಧಿಗಳನ್ನು ಸಹ ಕಿತ್ತುಹಾಕುವಿರಿ. ಕೊಯ್ಲಿನ ತನಕ ಕಾಯಿರಿ. ಅನಂತರ ಕಳೆಗಳನ್ನು ಕಿತ್ತು ತೆಗೆದು ಹೊರೆಕಟ್ಟಿ ಅವುಗಳನ್ನು ಸುಟ್ಟುಹಾಕಿರಿ. ಆದಾದ ನಂತರ ಗೋಧಿಗಳನ್ನು ನನ್ನ ಕಣಜಕ್ಕೆ ತುಂಬಿರಿ.'"
ಶಿಷ್ಯರು ಈ ಕಥೆಯ ಅರ್ಥವನ್ನು ಅರ್ಥಮಾಡಿಕೊಳ್ಳಲಿಲ್ಲ, ಆದ್ದರಿಂದ ಅವರು ಅದನ್ನು ವಿವರಿಸಿ ಹೇಳು ಎಂದು ಯೇಸುವನ್ನು ಕೇಳಿದರು. ಯೇಸು ಹೇಳಿದ್ದೇನಂದರೆ, "ಒಳ್ಳೆಯ ಬೀಜವನ್ನು ಬಿತ್ತಿದ್ದ ವ್ಯಕ್ತಿಯು ಮೆಸ್ಸೀಯನನ್ನು ಪ್ರತಿನಿಧಿಸುತ್ತಾನೆ. ಹೊಲವು ಈ ಲೋಕವನ್ನು ಪ್ರತಿನಿಧಿಸುತ್ತದೆ ಒಳ್ಳೆಯ ಬೀಜವು ದೇವರ ರಾಜ್ಯದ ಜನರನ್ನು ಪ್ರತಿನಿಧಿಸುತ್ತದೆ."
"ಕಳೆಗಳು ದುಷ್ಟನಾದ ಸೈತಾನನಿಗೆ ಸೇರಿರುವ ಜನರನ್ನು ಪ್ರತಿನಿಧಿಸುತ್ತವೆ. ಕಳೆಗಳನ್ನು ಬಿತ್ತಿದ್ದ ಆ ಮನುಷ್ಯನ ಶತ್ರುವು, ಸೈತಾನನನ್ನು ಪ್ರತಿನಿಧಿಸುತ್ತದೆ. ಕೊಯ್ಲು ಲೋಕದ ಅಂತ್ಯವನ್ನು ಪ್ರತಿನಿಧಿಸುತ್ತದೆ ಮತ್ತು ಕೊಯ್ಲುಗಾರರು ದೇವರ ದೂತರನ್ನು ಪ್ರತಿನಿಧಿಸುತ್ತಾರೆ."
"ಲೋಕವು ಅಂತ್ಯಗೊಳ್ಳುವಾಗ, ದೇವದೂತರು ಸೈತಾನನಿಗೆ ಸಂಬಂಧಪಟ್ಟಂಥ ಎಲ್ಲಾ ಜನರನ್ನು ಒಟ್ಟುಗೂಡಿಸುತ್ತಾರೆ. ದೇವದೂತರು ಅವರನ್ನು ಬಹಳ ಉರಿಯುವ ಬೆಂಕಿಗೆ ಹಾಕುವರು. ಈ ಜನರು ಅಲ್ಲಿ ಭಯಂಕರವಾದ ಯಾತನೆಯಿಂದ ಗೋಳಾಡುವರು ಮತ್ತು ತಮ್ಮ ಹಲ್ಲುಗಳನ್ನು ಕಡಿಯುವರು. ಆದರೆ ನೀತಿವಂತರು, ಯೇಸುವನ್ನು ಹಿಂಬಾಲಿಸಿದವರು ತಮ್ಮ ತಂದೆಯಾದ ದೇವರ ರಾಜ್ಯದಲ್ಲಿ ಸೂರ್ಯನಂತೆಯೇ ಪ್ರಕಾಶಿಸುವರು."
ಲೋಕದ ಅಂತ್ಯ ಬರುವುದಕ್ಕಿಂತ ಮುಂಚೆಯೇ ಆತನು ಭೂಮಿಗೆ ಹಿಂದಿರುಗಿ ಬರುವನೆಂದು ಯೇಸು ಹೇಳಿದನು. ಆತನು ಪರಲೋಕಕ್ಕೆ ಹೋದಂತೆಯೇ ಆತನು ಹಿಂದಿರುಗಿ ಬರುವನು. ಅಂದರೆ ಅವನಿಗೆ ನಿಜವಾದ ದೇಹವಿರುತ್ತದೆ ಮತ್ತು ಆತನು ಆಕಾಶದ ಮೇಘಗಳ ಮೇಲೆ ಬರುತ್ತಾನೆ. ಯೇಸು ಹಿಂದಿರುಗಿ ಬರುವಾಗ, ಸತ್ತುಹೋಗಿರುವ ಎಲ್ಲಾ ಕ್ರೈಸ್ತರು ಸತ್ತವರೊಳಗಿಂದ ಎದ್ದು ಆಕಾಶದಲ್ಲಿ ಆತನನ್ನು ಭೇಟಿಯಾಗುತ್ತಾರೆ.
ಅನಂತರ ಇನ್ನೂ ಜೀವಂತವಾಗಿರುವ ಕ್ರೈಸ್ತರು ಆಕಾಶಕ್ಕೆ ಒಯ್ಯಲ್ಪಡುವರು, ಸತ್ತವರೊಳಗಿಂದ ಎದ್ದು ಬಂದ ಇತರ ಕ್ರೈಸ್ತರೊಂದಿಗೆ ಸೇರಿಕೊಳ್ಳುತ್ತಾರೆ. ಅವರೆಲ್ಲರು ಅಲ್ಲಿ ಯೇಸುವಿನೊಂದಿಗೆ ಇರುವರು. ಅದಾದ ನಂತರ ಯೇಸು ತನ್ನ ಜನರೊಂದಿಗೆ ಜೀವಿಸುತ್ತಾನೆ. ಅವರು ಒಟ್ಟಾಗಿ ಜೀವಿಸುವಾಗ ಅವರಿಗೆ ನಿತ್ಯವಾದ ಶಾಂತಿಯು ದೊರಕುತ್ತದೆ.
ಯೇಸು ತನ್ನನ್ನು ನಂಬುವ ಎಲ್ಲರಿಗೂ ಕಿರೀಟವನ್ನು ಕೊಡುವೆನೆಂದು ವಾಗ್ದಾನ ಮಾಡಿದ್ದಾನೆ. ಅವರು ಸದಾಕಾಲವೂ ದೇವರೊಂದಿಗಿದ್ದು ಎಲ್ಲವನ್ನು ನಿತ್ಯವಾಗಿ ಆಳುತ್ತಾರೆ. ಅವರಿಗೆ ಪರಿಪೂರ್ಣ ಶಾಂತಿ ಇರುತ್ತದೆ.
ಆದರೆ ಯೇಸುವನ್ನು ನಂಬದಂಥ ಎಲ್ಲರಿಗೂ ದೇವರು ನ್ಯಾಯತೀರ್ಪು ಮಾಡುವನು. ಆತನು ಅವರನ್ನು ನರಕಕ್ಕೆ ಹಾಕುವನು. ಅವರು ಅಲ್ಲಿ ಗೋಳಾಡುವರು, ತಮ್ಮ ಹಲ್ಲುಗಳನ್ನು ಕಡಿಯುವರು ಮತ್ತು ಅವರು ನಿತ್ಯವಾಗಿ ಯಾತನೆಯನ್ನುಭವಿಸುವರು. ಆರದ ಬೆಂಕಿಯು ಅವರನ್ನು ನಿರಂತರವಾಗಿ ದಹಿಸುತ್ತದೆ ಮತ್ತು ಹುಳುಗಳು ಅವರನ್ನು ತಿನ್ನುವುದನ್ನು ನಿಲ್ಲಿಸುವುದಿಲ್ಲ.
ಯೇಸು ಹಿಂದಿರುಗಿ ಬರುವಾಗ, ಆತನು ಸೈತಾನನನ್ನು ಮತ್ತು ಅವನ ರಾಜ್ಯವನ್ನು ಸಂಪೂರ್ಣವಾಗಿ ನಾಶಮಾಡುವನು. ಆತನು ಸೈತಾನನನ್ನು ನರಕಕ್ಕೆ ಹಾಕುತ್ತಾನೆ. ಸೈತಾನನು ನಿತ್ಯವಾಗಿ ಅಲ್ಲಿ ಸುಡಲ್ಪಡುತ್ತಾನೆ, ದೇವರನ್ನು ಅನುಸರಿಸುವ ಬದಲು ಆತನನ್ನು ಹಿಂಬಾಲಿಸಲು ನಿರ್ಧರಿಸಿದ ಎಲ್ಲರೂ ಅವನೊಂದಿಗೆ ಸುಡಲ್ಪಡುತ್ತಾರೆ.
ಆದಾಮ ಮತ್ತು ಹವ್ವರು ದೇವರಿಗೆ ಅವಿಧೇಯರಾಗಿ ಪಾಪವನ್ನು ಈ ಲೋಕಕ್ಕೆ ತಂದ ಕಾರಣ ದೇವರು ಅದನ್ನು ಶಪಿಸಿದನು ಮತ್ತು ಅದನ್ನು ನಾಶಮಾಡಲು ನಿರ್ಧರಿಸಿದನು. ಆದರೆ ಒಂದು ದಿನ ದೇವರು ಹೊಸ ಪರಲೋಕವನ್ನು ಮತ್ತು ಹೊಸ ಭೂಮಿಯನ್ನು ಸೃಷ್ಟಿಸುತ್ತಾನೆ ಅದು ಪರಿಪೂರ್ಣವಾಗಿರುತ್ತದೆ.
ಯೇಸು ಮತ್ತು ಆತನ ಜನರು ಹೊಸ ಭೂಮಿಯ ಮೇಲೆ ಜೀವಿಸುತ್ತಾರೆ, ಮತ್ತು ಅವರು ಎಲ್ಲದರ ಮೇಲೆ ನಿತ್ಯವಾಗಿ ಆಳುತ್ತಾರೆ. ಆತನು ಜನರ ಕಣ್ಣೀರನ್ನು ಒರೆಸುತ್ತಾನೆ. ಯಾರೂ ಸಂಕಟಪಡುವುದಿಲ್ಲ ಅಥವಾ ದುಃಖಿಸುವುದಿಲ್ಲ. ಅವರು ಅಳುವುದಿಲ್ಲ. ಅವರು ಅಸ್ವಸ್ಥರಾಗುವುದಿಲ್ಲ ಅಥವಾ ಸಾಯುವುದಿಲ್ಲ. ಮತ್ತು ಅಲ್ಲಿ ಕೆಟ್ಟದ್ದೇನೂ ಇರುವುದಿಲ್ಲ. ಯೇಸು ತನ್ನ ರಾಜ್ಯವನ್ನು ನ್ಯಾಯವಾಗಿ ಶಾಂತಿಯಿಂದ ಆಳುತ್ತಾನೆ. ಆತನು ಆತನ ಜನರೊಂದಿಗೆ ಶಾಶ್ವತವಾಗಿರುತ್ತಾನೆ.