unfoldingWord 14 - ಅರಣ್ಯದಲ್ಲಿ ಅಲೆದಾಟ
Obris: Exodus 16-17; Numbers 10-14; 20; 27; Deuteronomy 34
Broj skripte: 1214
Jezik: Kannada
Publika: General
Svrha: Evangelism; Teaching
Features: Bible Stories; Paraphrase Scripture
Status: Approved
Skripte su osnovne smjernice za prevođenje i snimanje na druge jezike. Treba ih prilagoditi prema potrebi kako bi bili razumljivi i relevantni za svaku različitu kulturu i jezik. Neki korišteni pojmovi i pojmovi možda će trebati dodatno objašnjenje ili će ih se čak zamijeniti ili potpuno izostaviti.
Tekst skripte
ಆತನು ಅವರೊಂದಿಗೆ ಒಡಂಬಡಿಕೆಯನ್ನು ಮಾಡಿಕೊಂಡಿದ್ದರಿಂದ ಇಸ್ರಾಯೇಲ್ಯರು ಅನುಸರಿಸಬೇಕಾದ ಎಲ್ಲಾ ನಿಯಮಗಳ ಬಗ್ಗೆ ದೇವರು ಅವರಿಗೆ ಹೇಳಿ ಮುಗಿಸಿದನು. ಅನಂತರ ಆತನು ಅವರನ್ನು ಸೀನಾಯಿ ಬೆಟ್ಟದಿಂದ ಬೇರೆಡೆಗೆ ನಡಿಸಿದನು. ಆತನು ಅವರನ್ನು ವಾಗ್ದತ್ತ ದೇಶಕ್ಕೆ ಕರೆದುಕೊಂಡು ಹೋಗಲು ಬಯಸಿದ್ದನು. ಈ ದೇಶವನ್ನು ಕಾನಾನ್ ಎಂದು ಸಹ ಕರೆಯಲಾಗುತ್ತದೆ. ದೇವರು ಮೇಘಸ್ತಂಭವಾಗಿ ಅವರ ಮುಂದೆ ಹೋದನು ಮತ್ತು ಅವರು ಆತನನ್ನು ಹಿಂಬಾಲಿಸಿದರು.
ವಾಗ್ದತ್ತ ದೇಶವನ್ನು ಅವರ ಸಂತತಿಯವರಿಗೆ ಕೊಡುವೆನೆಂದು ದೇವರು ಅಬ್ರಹಾಮ್, ಇಸಾಕ್ ಮತ್ತು ಯಾಕೋಬರಿಗೆ ವಾಗ್ದಾನ ಮಾಡಿದನು, ಆದರೆ ಈಗ ಅಲ್ಲಿ ಅನೇಕ ಜನಾಂಗಗಳು ವಾಸಿಸುತ್ತಿದ್ದವು. ಅವರನ್ನು ಕಾನಾನ್ಯರು ಎಂದು ಕರೆಯಲಾಗುತ್ತಿತ್ತು. ಕಾನಾನ್ಯರು ದೇವರನ್ನು ಆರಾಧಿಸುತ್ತಿರಲಿಲ್ಲ ಅಥವಾ ಅನುಸರಿಸುತ್ತಿರಲಿಲ್ಲ. ಅವರು ಮಿಥ್ಯ ದೇವರುಗಳನ್ನು ಪೂಜಿಸುತ್ತಿದ್ದರು ಮತ್ತು ಅನೇಕ ದುಷ್ಟ ಕೆಲಸಗಳನ್ನು ಮಾಡುತ್ತಿದ್ದರು.
ದೇವರು ಇಸ್ರಾಯೇಲ್ಯರಿಗೆ, "ನೀವು ವಾಗ್ದತ್ತ ದೇಶಕ್ಕೆ ಹೋದ ನಂತರ ಅಲ್ಲಿರುವ ಎಲ್ಲಾ ಕಾನಾನ್ಯರನ್ನು ನೀವು ಹೊರದೂಡಬೇಕು, ಅವರೊಂದಿಗೆ ಸಮಾಧಾನದ ಒಪ್ಪಂದವನ್ನು ಮಾಡಿಕೊಳ್ಳಬಾರದು ಮತ್ತು ಅವರನ್ನು ಮದುವೆಯಾಗಬಾರದು. ನೀವು ಅವರ ಎಲ್ಲಾ ವಿಗ್ರಹಗಳನ್ನು ಸಂಪೂರ್ಣವಾಗಿ ನಾಶಮಾಡಬೇಕು. ನೀವು ನನಗೆ ವಿಧೇಯರಾಗದಿದ್ದರೆ, ನನಗೆ ಬದಲಾಗಿ ನೀವು ಅವರ ವಿಗ್ರಹಗಳನ್ನು ಆರಾಧಿಸುವವರಾಗುವಿರಿ" ಎಂದು ಹೇಳಿದನು.
ಇಸ್ರಾಯೇಲ್ಯರು ಕಾನಾನಿನ ಮೇರೆಯನ್ನು ತಲುಪಿದಾಗ, ಮೋಶೆಯು ಇಸ್ರಾಯೇಲರ ಒಂದೊಂದು ಕುಲದಿಂದ ಒಬ್ಬನಂತೆ ಹನ್ನೆರಡು ಜನರನ್ನು ಆರಿಸಿಕೊಂಡನು. ಆ ದೇಶಕ್ಕೆ ಹೋಗಿ ಅದು ಹೇಗಿದೆ ಎಂದು ಹೊಂಚಿ ನೋಡಿಕೊಂಡು ಬರಬೇಕೆಂದು ಅವನು ಆ ಮನುಷ್ಯರಿಗೆ ಆದೇಶ ನೀಡಿದ್ದನು. ಕಾನಾನ್ಯರು ಬಲಿಷ್ಠರೋ ಅಥವಾ ದುರ್ಬಲರೋ ಎಂದು ಕಂಡುಕೊಳ್ಳಲು ಅವರು ಕಾನಾನ್ಯರನ್ನು ಸಹ ಹೊಂಚಿ ನೋಡಬೇಕಾಗಿತ್ತು.
ಅವರಲ್ಲಿ ಹನ್ನೆರಡು ಮಂದಿ ಕಾನಾನ್ ದೇಶದ ಪರ್ಯಂತರ ನಲವತ್ತು ದಿನಗಳವರೆಗೆ ಪ್ರಯಾಣಿಸಿ, ಅನಂತರ ಅವರು ಹಿಂದಿರುಗಿ ಬಂದರು. ಅವರು ಜನರಿಗೆ, "ದೇಶವು ಬಹಳ ಫಲವತ್ತಾಗಿದೆ ಮತ್ತು ಬೆಳೆಗಳು ಸಮೃದ್ಧವಾಗಿವೆ!" ಎಂದು ಹೇಳಿದರು. ಆದರೆ ಹತ್ತು ಮಂದಿ ಗೂಢಚಾರರು, "ಪಟ್ಟಣಗಳು ಬಹಳ ಬಲವಾಗಿವೆ ಮತ್ತು ಅಲ್ಲಿನ ಜನರು ದೈತ್ಯರಾಗಿದ್ದಾರೆ! ನಾವು ಅವರ ಮೇಲೆ ದಾಳಿ ಮಾಡಿದರೆ, ಅವರು ನಮ್ಮನ್ನು ಸೋಲಿಸುವರು ಮತ್ತು ನಮ್ಮನ್ನು ಕೊಲ್ಲುವರು!" ಎಂದು ಹೇಳಿದರು.
ಇತರ ಇಬ್ಬರು ಗೂಢಚಾರರು ಅಂದರೆ ಕಾಲೇಬನು ಮತ್ತು ಯೆಹೋಶುವನು ತಕ್ಷಣವೇ, "ಕಾನಾನಿನ ಜನರು ಉನ್ನತರು ಮತ್ತು ಬಲಿಷ್ಠರು ಆಗಿದ್ದಾರೆ ನಿಜ, ಆದರೆ ನಾವು ಅವರನ್ನು ಖಂಡಿತವಾಗಿಯೂ ಸೋಲಿಸಬಹುದು! ದೇವರು ನಮಗಾಗಿ ಯುದ್ಧಮಾಡುವನು!" ಎಂದು ಹೇಳಿದರು.
ಆದರೆ ಜನರು ಕಾಲೇಬನಿಗೂ ಮತ್ತು ಯೆಹೋಶುವನಿಗೂ ಕಿವಿಗೊಡಲಿಲ್ಲ. ಅವರು ಮೋಶೆ ಆರೋನರ ಮೇಲೆ ಕೋಪಗೊಂಡು, "ನೀನು ಈ ಭಯಾನಕ ಸ್ಥಳಕ್ಕೆ ನಮ್ಮನ್ನು ಕರೆತಂದಿದ್ದೇಕೆ? ನಾವು ಈಜಿಪ್ಟಿನಲ್ಲಿಯೇ ಇರಬೇಕಾಗಿತ್ತು. ನಾವು ಆ ದೇಶಕ್ಕೆ ಹೋದರೆ ಯುದ್ಧದಲ್ಲಿ ನಾವು ಸಾಯುತ್ತೇವೆ ಮತ್ತು ಕಾನಾನ್ಯರು ನಮ್ಮ ಹೆಂಡತಿ ಮಕ್ಕಳನ್ನು ಗುಲಾಮರನ್ನಾಗಿ ಮಾಡಿಕೊಳ್ಳುತ್ತಾರೆ" ಎಂದು ಹೇಳಿದರು. ಜನರು ತಮ್ಮನ್ನು ಈಜಿಪ್ಟಿಗೆ ಹಿಂತಿರುಗಿ ಕರೆದುಕೊಂಡು ಹೋಗುವುದಕ್ಕಾಗಿ ಬೇರೊಬ್ಬ ನಾಯಕನನ್ನು ಆರಿಸಿಕೊಳ್ಳಲು ಬಯಸಿದರು.
ಜನರು ಇದನ್ನು ಹೇಳಿದಾಗ ದೇವರು ಬಹಳ ಕೋಪಗೊಂಡನು. ಆತನು ದೇವದರ್ಶನ ಗುಡಾರಕ್ಕೆ ಇಳಿದುಬಂದು "ನೀವು ನನಗೆ ವಿರುದ್ಧವಾಗಿ ತಿರುಗಿಬಿದ್ದಿದ್ದೀರಿ, ಆದ್ದರಿಂದ ನೀವೆಲ್ಲರೂ ಅರಣ್ಯದಲ್ಲಿ ಅಲೆದಾಡಬೇಕು. ಇಪ್ಪತ್ತು ವರುಷ ಮೊದಲುಗೊ೦ಡು ಹೆಚ್ಚಾದ ವಯಸ್ಸುಳ್ಳವರೆಲ್ಲರೂ ಸಾಯುವರು ಮತ್ತು ನಾನು ನಿಮಗೆ ಕೊಡುವ ದೇಶಕ್ಕೆ ನೀವ್ಯಾರು ಸೇರುವುದಿಲ್ಲ. ಯೆಹೋಶುವನು ಮತ್ತು ಕಾಲೇಬನು ಮಾತ್ರ ಆ ದೇಶಕ್ಕೆ ಸೇರುವರು" ಎಂದು ಹೇಳಿದನು.
ದೇವರು ಹೀಗೆ ಹೇಳುವುದನ್ನು ಜನರು ಕೇಳಿದಾಗ, ತಾವು ಪಾಪಮಾಡಿದ್ದೇವೆ ಎಂದು ಅವರು ದುಃಖಪಟ್ಟರು. ಆದ್ದರಿಂದ ಅವರು ಕಾನಾನಿನ ಜನರ ಮೇಲೆ ದಾಳಿ ಮಾಡಲು ನಿರ್ಧರಿಸಿದರು. ದೇವರು ನಿಮ್ಮೊಂದಿಗೆ ಬರುವುದಿಲ್ಲ ಆದ್ದರಿಂದ ನೀವು ಹೋಗಬೇಡಿರಿ ಎಂದು ಮೋಶೆ ಅವರಿಗೆ ಎಚ್ಚರಿಕೆ ಕೊಟ್ಟರೂ ಅವರು ಅವನಿಗೆ ಕಿವಿಗೊಡಲಿಲ್ಲ.
ಈ ಯುದ್ಧದಲ್ಲಿ ದೇವರು ಅವರೊಂದಿಗೆ ಹೋಗಲಿಲ್ಲ, ಆದ್ದರಿಂದ ಕಾನಾನ್ಯರು ಅವರನ್ನು ಸೋಲಿಸಿ ಅವರಲ್ಲಿ ಅನೇಕರನ್ನು ಕೊಂದುಹಾಕಿದರು. ಆಗ ಇಸ್ರಾಯೇಲ್ಯರು ಕಾನಾನನಿಂದ ಹಿಂತಿರುಗಿ ಬಂದರು. ಮುಂದಿನ ನಲವತ್ತು ವರ್ಷಗಳ ಕಾಲ ಅವರು ಅರಣ್ಯದಲ್ಲಿ ಅಲೆದಾಡುತ್ತಿದ್ದರು.
ನಲವತ್ತು ವರ್ಷಗಳ ಕಾಲ ಇಸ್ರಾಯೇಲ್ ಜನರು ಅರಣ್ಯದಲ್ಲಿ ಅಲೆದಾಡಿದರು, ದೇವರು ಅವರ ಎಲ್ಲಾ ಅಗತ್ಯತೆಗಳನ್ನು ಒದಗಿಸಿಕೊಟ್ಟನು. "ಮನ್ನಾ" ಎಂದು ಕರೆಯಲ್ಪಡುವ ಆಹಾರವನ್ನು ಆತನು ಪರಲೋಕದಿಂದ ಅವರಿಗೆ ಕೊಟ್ಟನು. ಆತನು ಲಾವಕ್ಕಿಯ ಹಿಂಡುಗಳನ್ನು ಸಹ (ಅವು ಮಧ್ಯಮ ಗಾತ್ರದ ಪಕ್ಷಿಗಳು) ಅವರ ಪಾಳೆಯಕ್ಕೆ ಬರಮಾಡಿದನು, ಆದ್ದರಿಂದ ಅವರಿಗೆ ತಿನ್ನಲು ಮಾಂಸವು ದೊರಕಿತು. ಆ ಸಮಯದಲ್ಲೆಲ್ಲಾ, ದೇವರು ಅವರ ಬಟ್ಟೆಗಳು ಮತ್ತು ಕೆರಗಳು ಹರಿದುಹೋಗದಂತೆ ಕಾಪಾಡಿದನು.
ಅವರಿಗೆ ಕುಡಿಯುವದಕ್ಕಾಗಿ ನೀರನ್ನು ಬಂಡೆಯಿಂದ ದೇವರು ಅದ್ಭುತವಾದ ರೀತಿಯಲ್ಲಿ ಬರಮಾಡಿದನು. ಆದರೆ ಇವೆಲ್ಲವುಗಳ ಹೊರತಾಗಿಯೂ, ಇಸ್ರಾಯೇಲ್ ಜನರು ದೇವರಿಗೆ ಮತ್ತು ಮೋಶೆಗೆ ವಿರುದ್ಧವಾಗಿ ದೂರುಹೇಳುತ್ತಿದ್ದರು ಮತ್ತು ಗುಣಗುಟ್ಟುತ್ತಿದ್ದರು. ಹಾಗಿದ್ದರೂ, ಆದಾಗ್ಯೂ ದೇವರು ನಂಬಿಗಸ್ತನಾಗಿದ್ದನು. ದೇವರು ಅಬ್ರಹಾಮ್, ಇಸಾಕ್ ಮತ್ತು ಯಾಕೋಬರ ಸಂತತಿಯವರಿಗೆ ಮಾಡಿದ ವಾಗ್ದಾನಗಳನ್ನು ನೆರವೆರಿಸಿದನು.
ಜನರಿಗೆ ನೀರಿಲ್ಲದ ಇನ್ನೊಂದು ಸಮಯದಲ್ಲಿ ದೇವರು ಮೋಶೆಗೆ, "ಬಂಡೆಗೆ ನುಡಿ ಅದರೊಳಗಿಂದ ನೀರು ಬರುತ್ತದೆ" ಎಂದು ಹೇಳಿದನು. ಆದರೆ ಮೋಶೆಯು ಬಂಡೆಗೆ ನುಡಿಯಲಿಲ್ಲ. ಬದಲಾಗಿ, ಅವನು ಕೋಲಿನಿಂದ ಎರಡು ಬಾರಿ ಬಂಡೆಯನ್ನು ಹೊಡೆದನು. ಈ ರೀತಿಯಾಗಿ ಅವನು ದೇವರನ್ನು ಅವಮಾನಿಸಿದನು. ಎಲ್ಲರು ಕುಡಿಯುವುದಕ್ಕಾಗಿ ಬಂಡೆಯಿಂದ ನೀರು ಬಂತು, ಆದರೆ ದೇವರು ಮೋಶೆಯ ಮೇಲೆ ಕೋಪಗೊಂಡನು. ಆತನು, "ನೀನು ಹೀಗೆ ಮಾಡಿದ್ದರಿಂದ, ನೀನು ವಾಗ್ದತ್ತ ದೇಶವನ್ನು ಸೇರುವುದಿಲ್ಲ" ಎಂದು ಹೇಳಿದನು.
ಇಸ್ರಾಯೇಲ್ಯರು ನಲವತ್ತು ವರ್ಷಗಳ ಕಾಲ ಅರಣ್ಯದಲ್ಲಿ ಅಲೆದಾಡಿದ ನಂತರ, ದೇವರಿಗೆ ವಿರೋಧವಾಗಿ ತಿರುಗಿಬಿದ್ದವರೆಲ್ಲರು ಸತ್ತುಹೋದರು. ಅನಂತರ ದೇವರು ಜನರನ್ನು ಮತ್ತೊಮ್ಮೆ ವಾಗ್ದತ್ತ ದೇಶದ ಅಂಚಿಗೆ ನಡೆಸಿದನು. ಮೋಶೆಯು ಬಹಳ ವೃದ್ಧನಾಗಿದ್ದರಿಂದ, ಜನರನ್ನು ನಡೆಸುವುದಕ್ಕೆ ಅವನಿಗೆ ಸಹಾಯ ಮಾಡುವುದಕ್ಕಾಗಿ ದೇವರು ಯೆಹೋಶುವನನ್ನು ಆರಿಸಿಕೊಂಡನು. ಒಂದು ದಿನ ಮೋಶೆಯಂತಹ ಇನ್ನೊಬ್ಬ ಪ್ರವಾದಿಯನ್ನು ಜನರ ಬಳಿಗೆ ಕಳುಹಿಸುವನೆಂದು ದೇವರು ಮೋಶೆಗೆ ವಾಗ್ದಾನ ಮಾಡಿದನು.
ಅವನು ವಾಗ್ದತ್ತ ದೇಶವನ್ನು ನೋಡಲಾಗುವಂತೆ ಬೆಟ್ಟದ ಮೇಲಕ್ಕೆ ಹೋಗಲು ದೇವರು ಮೋಶೆಗೆ ಹೇಳಿದನು. ಮೋಶೆಯು ವಾಗ್ದತ್ತ ದೇಶವನ್ನು ನೋಡಿದನು ಆದರೆ ದೇವರು ಅವನನ್ನು ಆ ದೇಶಕ್ಕೆ ಪ್ರವೇಶಿಸಲು ಅನುಮತಿಸಲಿಲ್ಲ. ಅನಂತರ ಮೋಶೆಯು ಸತ್ತನು ಮತ್ತು ಇಸ್ರಾಯೇಲ್ಯರು ಮೂವತ್ತು ದಿನಗಳ ಕಾಲ ಶೋಕಿಸಿದರು. ಯೆಹೋಶುವನು ಅವರ ಹೊಸ ನಾಯಕನಾದನು. ಯೆಹೋಶುವನು ದೇವರನ್ನು ನಂಬಿ ಮತ್ತು ಆತನಿಗೆ ವಿಧೇಯನಾಗಿದ್ದ ಕಾರಣ ಒಬ್ಬ ಒಳ್ಳೆಯ ನಾಯಕನಾಗಿ ಕಂಡು ಬಂದನು