unfoldingWord 27 - ಒಳ್ಳೆ ಸಮಾರ್ಯದವನ ಕಥೆ
Grandes lignes: Luke 10:25-37
Numéro de texte: 1227
Langue: Kannada
Audience: General
Objectif: Evangelism; Teaching
Features: Bible Stories; Paraphrase Scripture
Statut: Approved
Les scripts sont des directives de base pour la traduction et l'enregistrement dans d'autres langues. Ils doivent être adaptés si nécessaire afin de les rendre compréhensibles et pertinents pour chaque culture et langue différente. Certains termes et concepts utilisés peuvent nécessiter plus d'explications ou même être remplacés ou complètement omis.
Corps du texte
ಯೆಹೂದ್ಯರ ಧರ್ಮಶಾಸ್ತ್ರದಲ್ಲಿ ಪರಿಣಿತನಾಗಿದ್ದ ಒಬ್ಬನು ಒಂದು ದಿನ ಯೇಸುವಿನ ಬಳಿಗೆ ಬಂದನು. ಯೇಸು ತಪ್ಪಾಗಿ ಬೋಧಿಸುತ್ತಿದ್ದಾನೆ ಎಂದು ಎಲ್ಲರಿಗೂ ತೋರಿಸಲು ಅವನು ಬಯಸಿ , “ಬೋಧಕನೇ, ನಾನು ನಿತ್ಯಜೀವವನ್ನು ಹೊಂದಿಕೊಳ್ಳಲು ಏನು ಮಾಡಬೇಕು?” ಎಂದು ಕೇಳಿದನು. ಅದಕ್ಕೆ ಯೇಸು ಅವನಿಗೆ, "ಧರ್ಮಶಾಸ್ತ್ರದಲ್ಲಿ ಏನು ಬರೆದದೆ?" ಎಂದು ಕೇಳಿದನು.
ಆ ಮನುಷ್ಯನು, "ನಿನ್ನ ದೇವರಾಗಿರುವ ಕರ್ತನನ್ನು ನಿನ್ನ ಪೂರ್ಣಹೃದಯದಿಂದಲೂ, ನಿನ್ನ ಪೂರ್ಣಪ್ರಾಣದಿಂದಲೂ, ನಿನ್ನ ಪೂರ್ಣಶಕ್ತಿಯಿಂದಲೂ ನಿನ್ನ ಪೂರ್ಣ ಬುದ್ಧಿಯಿಂದಲೂ ಪ್ರೀತಿಸಬೇಕು. ಮತ್ತು ನಿನ್ನ ನೆರೆಯವನನ್ನು ನಿನ್ನಂತೆಯೇ ಪ್ರೀತಿಸಬೇಕು ಎಂದು ಹೇಳುತ್ತದೆ" ಅಂದನು. ಯೇಸು ಅವನಿಗೆ, "ನೀನು ಸರಿಯಾಗಿ ಉತ್ತರಕೊಟ್ಟಿರುವಿ! ಅದರಂತೆ ಮಾಡು, ಮಾಡಿದರೆ ನಿತ್ಯಜೀವಕ್ಕೆ ಬಾಧ್ಯನಾಗುವಿ" ಎಂದು ಉತ್ತರಕೊಟ್ಟನು.
ಆದರೆ ಆ ಧರ್ಮಶಾಸ್ತ್ರಜ್ಞನು ತಾನು ಜೀವಿಸುವ ರೀತಿಯು ಸರಿಯಾಗಿದೆ ಎಂದು ಜನರಿಗೆ ತೋರಿಸಲು ಬಯಸಿದ್ದನು. ಆದ್ದರಿಂದ ಅವನು ಯೇಸುವಿಗೆ, "ಹಾಗಾದರೆ ನನ್ನ ನೆರೆಯವನು ಯಾರು?" ಎಂದು ಕೇಳಿದನು.
ಯೇಸು ಕಥೆಯನ್ನು ಹೇಳುವ ಮೂಲಕ ಧರ್ಮಶಾಸ್ತ್ರಜ್ಞನಿಗೆ ಉತ್ತರಿಸಿದನು. "ಯೆರೂಸಲೇಮಿನಿಂದ ಯೆರಿಕೋವಿಗೆ ದಾರಿಯಲ್ಲಿ ಪ್ರಯಾಣಿಸುತ್ತಿದ್ದ ಒಬ್ಬಾನೊಬ್ಬ ಯೆಹೂದ್ಯ ಮನುಷ್ಯನಿದ್ದನು."
"ಆದರೆ ಕೆಲವು ಮಂದಿ ಕಳ್ಳರು ಅವನನ್ನು ಕಂಡು ಅವನ ಮೇಲೆ ಹಲ್ಲೆ ಮಾಡಿದರು. ಅವರು ಅವನಿಗಿದ್ದದ್ದೆಲ್ಲವನ್ನು ಕಿತ್ತುಕೊಂಡು ಸಾಯುವಷ್ಟರ ಮಟ್ಟಿಗೆ ಅವನನ್ನು ಹೊಡೆದು, ನಂತರ ಅವರು ಹೊರಟುಹೋದರು.”
"ಸ್ವಲ್ಪ ಸಮಯವಾದ ನಂತರ, ಒಬ್ಬ ಯೆಹೂದ್ಯ ಯಾಜಕನು ಅದೇ ದಾರಿಯಲ್ಲಿ ನಡೆದು ಬಂದನು. ಈ ಯಾಜಕನು ದಾರಿಯಲ್ಲಿ ಬಿದ್ದಿರುವಂಥ ಆ ಮನುಷ್ಯನನ್ನು ನೋಡಿದನು. ಅವನು ಆ ಮನುಷ್ಯನನ್ನು ನೋಡಿದಾಗ ರಸ್ತೆಯ ಇನ್ನೊಂದು ಕಡೆಗೆ ಹೋಗಿ ಅಲ್ಲಿಂದ ಹೊರಟುಹೋದನು, ಅವನು ಆ ವ್ಯಕ್ತಿಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದನು."
"ಇನ್ನೂ ಸ್ವಲ್ಪ ಸಮಯವಾದ ನಂತರ, ಒಬ್ಬ ಲೇವಿಯನು ದಾರಿಯಲ್ಲಿ ಬಂದನು (ಲೇವಿಯರು ದೇವಾಲಯದಲ್ಲಿ ಯಾಜಕರಿಗೆ ಸಹಾಯಮಾಡುವಂಥ ಯೆಹೂದ್ಯರ ಒಂದು ಕುಲವಾಗಿತ್ತು.) ಲೇವಿಯೂ ಕೂಡ ರಸ್ತೆಯ ಇನ್ನೊಂದು ಬದಿಗೆ ದಾಟಿಹೋದನು ಮತ್ತು ಅವನು ಕೂಡ ಆ ವ್ಯಕ್ತಿಯನ್ನು ನಿರ್ಲಕ್ಷಿಸಿದನು."
"ತರುವಾಯ ಆ ದಾರಿಯಲ್ಲಿ ಬಂದ ವ್ಯಕ್ತಿಯು ಸಮಾರ್ಯದಿಂದ ಬಂದಂಥ ಮನುಷ್ಯನಾಗಿದ್ದನು. (ಸಮಾರ್ಯದವರು ಮತ್ತು ಯೆಹೂದ್ಯರು ಪರಸ್ಪರ ಒಬ್ಬರನ್ನೊಬ್ಬರು ದ್ವೇಷಿಸುತ್ತಿದ್ದರು.) ಆ ಸಮಾರ್ಯದವನು ದಾರಿಯಲ್ಲಿರುವ ಮನುಷ್ಯನನ್ನು ನೋಡಿದನು. ಅವನು ಯೆಹೂದ್ಯನು ಎಂದು ಅವನು ತಿಳಿದುಕೊಂಡನು, ಆದರೂ ಅವನು ಅವನ ಮೇಲೆ ತುಂಬಾ ಕರುಣೆ ತೋರಿದನು. ಅವನು ಅವನ ಬಳಿಗೆ ಹೋಗಿ ಅವನ ಗಾಯಗಳನ್ನು ಕಟ್ಟಿದನು."
"ಆಗ ಸಮಾರ್ಯದವನು ಆ ಮನುಷ್ಯನನ್ನು ಎತ್ತಿ ತನ್ನ ಸ್ವಂತ ಕತ್ತೆಯ ಮೇಲೆ ಹತ್ತಿಸಿಕೊಂಡು, ಅವನನ್ನು ರಸ್ತೆಯ ಮೂಲಕ ಛತ್ರಕ್ಕೆ ಕರೆದುಕೊಂಡು ಹೋದನು. ಅಲ್ಲಿ ಅವನ ಆರೈಕೆಮಾಡುವುದನ್ನು ಮುಂದುವರೆಸಿದನು."
"ಮರುದಿನ, ಸಮಾರ್ಯದವನು ತನ್ನ ಪ್ರಯಾಣವನ್ನು ಮುಂದುವರೆಸಬೇಕಾಗಿತ್ತು. ಅವನು ಛತ್ರದ ಮೇಲ್ವಿಚಾರಕನಾದ ವ್ಯಕ್ತಿಗೆ ಸ್ವಲ್ಪ ಹಣವನ್ನು ಕೊಟ್ಟು, ಅವನು ಅವನಿಗೆ, 'ಈ ಮನುಷ್ಯನ ಆರೈಕೆಮಾಡು, ಇದಕ್ಕಿಂತ ಹೆಚ್ಚಾಗಿ ಏನಾದರೂ ವೆಚ್ಚಮಾಡಿದರೆ ನಾನು ಹಿಂತಿರುಗಿ ಬಂದಾಗ ನಿನಗೆ ಕೊಡುವೆನು'"
ಅನಂತರ ಯೇಸು ಧರ್ಮಶಾಸ್ತ್ರಜ್ಞನಿಗೆ, "ನಿನಗೆ ಹೇಗೆ ತೋರುತ್ತದೆ? ಈ ಮೂವರಲ್ಲಿ ಯಾರು ಸುಲಿಗೆಗೊಳಗಾಗಿ ಹೊಡೆತ ತಿಂದಂಥ ವ್ಯಕ್ತಿಗೆ ನೆರೆಯವನಾದನು?" ಎಂದು ಕೇಳಿದನು. "ಅವನಿಗೆ ಕರುಣೆ ತೋರಿಸಿದವನೇ" ಎಂದು ಅವನು ಉತ್ತರಿಸಿದನು. ಯೇಸು ಅವನಿಗೆ, "ಹೋಗು, ನೀನೂ ಅದರಂತೆ ಮಾಡು" ಎಂದು ಹೇಳಿದನು.