unfoldingWord 18 - ಇಬ್ಭಾಗವಾದ ರಾಜ್ಯ
План: 1 Kings 1-6; 11-12
Нумар сцэнарыя: 1218
мова: Kannada
Аўдыторыя: General
Прызначэнне: Evangelism; Teaching
Features: Bible Stories; Paraphrase Scripture
Статус: Approved
Скрыпты - гэта асноўныя рэкамендацыі для перакладу і запісу на іншыя мовы. Яны павінны быць адаптаваны па меры неабходнасці, каб зрабіць іх зразумелымі і актуальнымі для кожнай культуры і мовы. Некаторыя выкарыстаныя тэрміны і паняцці могуць мець патрэбу ў дадатковых тлумачэннях або нават быць замененымі або цалкам апушчанымі.
Тэкст сцэнара
ಅರಸನಾದ ದಾವೀದನು ದೇಶವನ್ನು ನಲವತ್ತು ವರ್ಷ ಆಳಿದನು. ಅನಂತರ ಅವನು ಸತ್ತನು, ಅವನ ಮಗನಾದ ಸೊಲೊಮೋನನು ಇಸ್ರಾಯೇಲನ್ನು ಆಳಲು ಆರಂಭಿಸಿದನು. ದೇವರು ಸೊಲೊಮೋನನ ಸಂಗಡ ಮಾತನಾಡಿ, ದೇವರು ತಾನು ಅವನಿಗೆ ಏನು ಮಾಡಬೇಕೆಂದು ಅವನು ಬಯಸುತ್ತಾನೆಂದು ಕೇಳಿದನು. ದೇವರು ತನ್ನನ್ನು ಬಹು ದೊಡ್ಡ ಜ್ಞಾನಿಯಾಗಿ ಮಾಡಬೇಕೆಂದು ಸೊಲೊಮೋನನು ದೇವರನ್ನು ಬೇಡಿಕೊಂಡನು. ಇದು ದೇವರಿಗೆ ಮೆಚ್ಚಿಕೆಯಾಯಿತು, ಆದ್ದರಿಂದ ಆತನು ಸೊಲೊಮೋನನನ್ನು ಲೋಕದ ಅತ್ಯಂತ ದೊಡ್ಡ ಜ್ಞಾನಿಯಾಗಿ ಮಾಡಿದನು. ಸೊಲೊಮೋನನು ಅನೇಕ ವಿಷಯಗಳನ್ನು ಕಲಿತುಕೊಂಡು, ಅತ್ಯಂತ ಜ್ಞಾನಿಯಾದ ಅರಸನಾದನು. ದೇವರು ಅವನನ್ನು ಅತ್ಯಂತ ಶ್ರೀಮಂತನನ್ನಾಗಿಯೂ ಸಹ ಮಾಡಿದನು.
ಸೊಲೊಮೋನನು ಯೆರೂಸಲೇಮಿನಲ್ಲಿ ದೇವಾಲಯವನ್ನು ಕಟ್ಟಿದನು, ಅವನ ತಂದೆಯಾದ ದಾವೀದನು ಅದಕ್ಕಾಗಿ ಯೋಜನೆಯನ್ನು ರೂಪಿಸಿದ್ದನು ಮತ್ತು ವಸ್ತುಗಳನ್ನು ಸಂಗ್ರಹಿಸಿಟ್ಟಿದ್ದನು. ಜನರು ದೇವದರ್ಶನ ಗುಡಾರಕ್ಕೆ ಬದಲಾಗಿ ಈಗ ದೇವಾಲಯದಲ್ಲಿ ದೇವರನ್ನು ಆರಾಧಿಸಿದರು ಮತ್ತು ಆತನಿಗೆ ಯಜ್ಞವನ್ನರ್ಪಿಸಿದರು. ದೇವರು ಬಂದು ದೇವಾಲಯದಲ್ಲಿದ್ದನು ಮತ್ತು ಆತನು ತನ್ನ ಜನರೊಂದಿಗೆ ವಾಸಿಸುತ್ತಿದ್ದನು.
ಆದರೆ ಸೊಲೊಮೋನನ ಇತರ ದೇಶಗಳ ಸ್ತ್ರೀಯರನ್ನು ಪ್ರೀತಿಸಿದ್ದನು. ಅವನು ಅನೇಕ ಸ್ತ್ರೀಯರನ್ನು ಅಂದರೆ ಸುಮಾರು 1,000 ಸ್ತ್ರೀಯರನ್ನು ಮದುವೆಯಾಗುವ ಮೂಲಕ ದೇವರಿಗೆ ಅವಿಧೇಯನಾದನು! ಈ ಸ್ತ್ರೀಯರಲ್ಲಿ ಅನೇಕರು ಅನ್ಯದೇಶಗಳಿಂದ ಬಂದವರಾಗಿದ್ದರು ಮತ್ತು ಅವರು ತಮ್ಮ ದೇವರುಗಳನ್ನು ತಮ್ಮೊಂದಿಗೆ ತೆಗೆದುಕೊಂಡು ಬಂದು ಅವುಗಳನ್ನು ಪೂಜಿಸುವುದನ್ನು ಮುಂದುವರೆಸಿದರು. ಸೊಲೊಮೋನನು ವೃದ್ಧನಾದ್ದಾಗ, ಅವನು ಸಹ ಅವರ ದೇವರುಗಳನ್ನು ಪೂಜಿಸಿದನು.
ಇದರ ನಿಮಿತ್ತವಾಗಿ ದೇವರು ಸೊಲೊಮೋನನ ಮೇಲೆ ಕೋಪಗೊಂಡನು. ಆತನು ಇಸ್ರಾಯೇಲ್ ದೇಶವನ್ನು ಎರಡು ರಾಜ್ಯಗಳಾಗಿ ಇಬ್ಭಾಗಿಸುವುದರ ಮೂಲಕ ಅವನನ್ನು ಶಿಕ್ಷಿಸುವೆನು ಎಂದು ಹೇಳಿದನು. ಆತನು ಇದನ್ನು ಸೊಲೊಮೋನನು ಸತ್ತ ನಂತರ ಮಾಡುವುದಾಗಿ ತಿಳಿಸಿದನು.
ಸೊಲೊಮೋನನು ಸತ್ತ ನಂತರ ಅವನ ಮಗನಾದ ರೆಹಬ್ಬಾಮನು ಅರಸನಾದನು. ಇಸ್ರಾಯೇಲ್ ದೇಶದ ಜನರೆಲ್ಲರು ಅವನನ್ನು ತಮ್ಮ ಅರಸನಾಗಿ ಸ್ವೀಕರಿಸಿಕೊಳ್ಳಲು ಒಟ್ಟಿಗೆ ಕೂಡಿಬಂದರು. ಸೊಲೊಮೋನನು ಅವರಿಗೆ ಬಹಳಷ್ಟು ಕಠಿಣವಾದ ಕೆಲಸವನ್ನು ಮಾಡುವಂತೆ ಮತ್ತು ಬಹಳಷ್ಟು ತೆರಿಗೆಗಳನ್ನು ಪಾವತಿಸುವಂತೆ ಮಾಡಿದ್ದಾನೆಂದು ಅವರು ರೆಹಬ್ಬಾಮನಿಗೆ ದೂರು ಹೇಳಿದರು. ತಮ್ಮ ಕೆಲಸವನ್ನು ಕಡಿಮೆ ಮಾಡಬೇಕೆಂದು ರೆಹಬ್ಬಾಮನನ್ನು ಕೇಳಿಕೊಂಡರು.
ಆದರೆ ರೆಹಬ್ಬಾಮನು ಅವರಿಗೆ ಬಹು ಮೂರ್ಖ ರೀತಿಯಲ್ಲಿ ಉತ್ತರಿಸಿದನು. ಅವನು, “ನನ್ನ ತಂದೆಯಾದ ಸೊಲೊಮೋನನು ನೀವು ಕಠಿಣವಾಗಿ ಕೆಲಸ ಮಾಡುವಂತೆ ಮಾಡಿದ್ದಾನೆಂದು ನೀವು ಹೇಳಿದ್ದೀರಿ, ಆದರೆ ನಾನು ಅವನು ಮಾಡಿದದ್ದಕ್ಕಿಂತಲೂ ಹೆಚ್ಚು ಕಠಿಣವಾಗಿ ನೀವು ಕೆಲಸ ಮಾಡುವಂತೆ ಮಾಡುವೆನು ಮತ್ತು ಅವನು ಮಾಡಿದದ್ದಕ್ಕಿಂತಲೂ ಹೆಚ್ಚು ನೀವು ಕಷ್ಟಪಡುವಂತೆ ಮಾಡುವೆನು” ಎಂದು ಹೇಳಿದನು.
ಅವನು ಹೀಗೆ ಹೇಳುವುದನ್ನು ಜನರು ಕೇಳಿದಾಗ ಅವರಲ್ಲಿ ಬಹುಮಂದಿ ಅವನಿಗೆ ವಿರುದ್ಧವಾಗಿ ತಿರುಗಿಬಿದ್ದರು. ಹತ್ತು ಕುಲಗಳು ಅವನನ್ನು ಬಿಟ್ಟು ಹೋದವು; ಕೇವಲ ಎರಡು ಕುಲಗಳು ಮಾತ್ರ ಅವನೊಂದಿಗೆ ಉಳಿದುಕೊಂಡವು. ಈ ಎರಡು ಕುಲಗಳು ತಮ್ಮನ್ನು ಯೆಹೂದ್ಯ ರಾಜ್ಯವೆಂದು ಕರೆದುಕೊಂಡರು.
ಇತರ ಹತ್ತು ಕುಲಗಳು ಯಾರೊಬ್ಬಾಮನೆಂಬ ವ್ಯಕ್ತಿಯನ್ನು ತಮ್ಮ ಅರಸನನ್ನಾಗಿ ಮಾಡಿಕೊಂಡರು. ಈ ಕುಲಗಳು ದೇಶದ ಉತ್ತರ ಭಾಗದಲ್ಲಿದ್ದರು. ಅವರು ತಮ್ಮನ್ನು ಇಸ್ರಾಯೇಲ್ ರಾಜ್ಯ ಎಂದು ಕರೆದುಕೊಂಡರು.
ಆದರೆ ಯಾರೊಬ್ಬಾಮನು ದೇವರಿಗೆ ವಿರೋಧವಾಗಿ ತಿರುಗಿಬಿದ್ದನು ಮತ್ತು ಜನರು ಪಾಪಮಾಡುವಂತೆ ಮಾಡಿದನು. ಅವನು ತನ್ನ ಜನರು ಪೂಜಿಸುವುದಕ್ಕಾಗುವಂತೆ ಎರಡು ವಿಗ್ರಹಗಳನ್ನು ಕಟ್ಟಿಸಿದನು. ಅವರು ದೇವಾಲಯದಲ್ಲಿ ದೇವರನ್ನು ಆರಾಧಿಸುವಂತೆ ಯೆಹೂದದ ರಾಜ್ಯದಲ್ಲಿರುವಂಥ ಯೆರೂಸಲೇಮಿಗೆ ಹೋಗಲಿಲ್ಲ.
ಯೆಹೂದ ಮತ್ತು ಇಸ್ರಾಯೇಲ್ ರಾಜ್ಯಗಳು ವೈರಿಗಳಾದವು ಮತ್ತು ಅನೇಕ ಸಾರಿ ಪರಸ್ಪರ ಒಬ್ಬರಿಗೊಬ್ಬರು ಯುದ್ಧಮಾಡಿಕೊಂಡರು.
ಇಸ್ರಾಯೇಲಿನ ಹೊಸ ರಾಜ್ಯದಲ್ಲಿನ ಎಲ್ಲಾ ಅರಸರು ದುಷ್ಟರಾಗಿದ್ದರು. ಈ ಅರಸರಲ್ಲಿ ಅನೇಕರು ಅವರ ಸ್ಥಾನದಲ್ಲಿ ಅರಸರಾಗಲು ಬಯಸಿದ್ದಂಥ ಇತರ ಇಸ್ರಾಯೇಲ್ಯರಿಂದ ಕೊಲ್ಲಲ್ಪಟ್ಟರು.
ಇಸ್ರಾಯೇಲ್ ರಾಜ್ಯದ ಎಲ್ಲಾ ಅರಸರು ಮತ್ತು ಬಹುತೇಕ ಎಲ್ಲಾ ಜನರು ವಿಗ್ರಹಗಳನ್ನು ಪೂಜಿಸಿದರು. ಅವರು ಹೀಗೆ ಮಾಡುವಾಗ, ಅವರು ಸಾಮಾನ್ಯವಾಗಿ ವೇಶ್ಯೆಯರ ಜೊತೆ ಮಲಗಿದರು ಮತ್ತು ಕೆಲವೊಮ್ಮೆ ವಿಗ್ರಹಗಳಿಗೆ ಮಕ್ಕಳನ್ನು ಬಲಿಕೊಟ್ಟರು.
ಯೆಹೂದದ ಅರಸರು ದಾವೀದನ ಸಂತತಿಯವರಾಗಿದ್ದರು. ಈ ಅರಸರಲ್ಲಿ ಕೆಲವರು ನ್ಯಾಯಯುತವಾಗಿ ಆಳ್ವಿಕೆ ನಡೆಸುತ್ತಿದಂಥ ಮತ್ತು ದೇವರನ್ನು ಆರಾಧಿಸುತ್ತಿದ್ದಂಥ ಒಳ್ಳೆಯ ಅರಸರಾಗಿದ್ದರು. ಆದರೆ ಯೆಹೂದದಲ್ಲಿ ಅನೇಕ ಅರಸರು ದುಷ್ಟರಾಗಿದ್ದರು. ಅವರು ಕೆಟ್ಟ ರೀತಿಯಲ್ಲಿ ಆಳಿದರು ಮತ್ತು ಅವರು ವಿಗ್ರಹಗಳನ್ನು ಪೂಜಿಸಿದರು. ಈ ಅರಸರಲ್ಲಿ ಕೆಲವರು ತಮ್ಮ ಮಕ್ಕಳನ್ನು ಸುಳ್ಳು ದೇವರುಗಳಿಗೆ ಬಲಿಕೊಟ್ಟರು. ಯೆಹೂದದ ಬಹುತೇಕ ಜನರು ದೇವರಿಗೆ ವಿರುದ್ಧವಾಗಿ ತಿರುಗಿಬಿದ್ದು ಬೇರೆ ದೇವರುಗಳನ್ನು ಪೂಜಿಸಿದರು.