unfoldingWord 43 - ಸಭೆಯ ಪ್ರಾರಂಭ

إستعراض: Acts 1:12-14; 2
رقم النص: 1243
لغة: Kannada
الجماهير: General
الغرض: Evangelism; Teaching
Features: Bible Stories; Paraphrase Scripture
حالة: Approved
هذا النص هو دليل أساسى للترجمة والتسجيلات فى لغات مختلفة. و هو يجب ان يعدل ليتوائم مع اللغات و الثقافات المختلفة لكى ما تتناسب مع المنطقة التى يستعمل بها. قد تحتاج بعض المصطلحات والأفكار المستخدمة إلى شرح كامل أو قد يتم حذفها فى ثقافات مختلفة.
النص

ಯೇಸು ಪರಲೋಕಕ್ಕೆ ಹಿಂದಿರುಗಿ ಹೋದ ನಂತರ, ಯೇಸು ಅವರಿಗೆ ಆಜ್ಞಾಪಿಸಿದಂತೆಯೇ ಶಿಷ್ಯರು ಯೆರೂಸಲೇಮಿನಲ್ಲಿ ಇದ್ದರು. ಅಲ್ಲಿದ್ದ ವಿಶ್ವಾಸಿಗಳು ಸತತವಾಗಿ ಪ್ರಾರ್ಥಿಸಲು ಕೂಡಿಬಂದಿದ್ದರು.

ಪಸ್ಕಹಬ್ಬವಾದ 50 ದಿನಗಳ ನಂತರ, ಪಂಚಾಶತ್ತಮ ಎಂದು ಕರೆಯಲ್ಪಡುವ ಪ್ರಾಮುಖ್ಯವಾದ ದಿನವನ್ನು ಯೆಹೂದ್ಯರು ಪ್ರತಿವರ್ಷವು ಆಚರಿಸುತ್ತಿದ್ದರು. ಪಂಚಾಶತ್ತಮದ ಸಮಯದಲ್ಲಿ ಯೆಹೂದ್ಯರು ಗೋಧಿ ಸುಗ್ಗಿಯನ್ನು ಆಚರಿಸುತ್ತಿದ್ದರು. ಪಂಚಾಶತ್ತಮದ ದಿನವನ್ನು ಒಟ್ಟಾಗಿ ಆಚರಿಸುವುದಕ್ಕಾಗಿ ಲೋಕದ ಎಲ್ಲಾ ಕಡೆಯಿಂದ ಯೆಹೂದ್ಯರು ಯೆರೂಸಲೇಮಿಗೆ ಬಂದರು. ಈ ವರ್ಷದ ಪಂಚಾಶತ್ತಮದ ಸಮಯವು, ಯೇಸು ಪರಲೋಕಕ್ಕೆ ಹಿಂದಿರುಗಿ ಹೋಗಿ ಸುಮಾರು ಒಂದು ವಾರವಾದ ನಂತರ ಬಂದಿತು.

ವಿಶ್ವಾಸಿಗಳೆಲ್ಲರು ಒಟ್ಟಾಗಿ ಕೂಡಿಬಂದಿದ್ದಾಗ, ಇದ್ದಕ್ಕಿದ್ದಂತೆ ಅವರು ಇದ್ದ ಮನೆಯಲ್ಲಿ ಬಿರುಗಾಳಿಯಂಥ ಶಬ್ದವು ತುಂಬಿಕೊಂಡಿತು. ಆಗ ಬೆಂಕಿಯ ಜ್ವಾಲೆಯಂತೆ ಕಾಣಿಸಿಕೊಳ್ಳುವಂಥ ಏನೋ ಒಂದು ಎಲ್ಲ ವಿಶ್ವಾಸಿಗಳ ತಲೆಯ ಮೇಲೆ ಕಾಣಿಸಿಕೊಂಡಿತು. ಅವರೆಲ್ಲರು ಪವಿತ್ರಾತ್ಮನಿಂದ ತುಂಬಿದವರಾದರು ಮತ್ತು ಅವರು ಬೇರೆ ಭಾಷೆಗಳಲ್ಲಿ ದೇವರನ್ನು ಸ್ತುತಿಸಿದರು. ಈ ಭಾಷೆಗಳು ಪವಿತ್ರಾತ್ಮನು ಅವರಿಗೆ ನೀಡಿದ ಶಕ್ತಿಯ ಪ್ರಕಾರ ಅವರು ಮಾತನಾಡಿದ ಭಾಷೆಗಳಾಗಿದ್ದವು.

ಯೆರೂಸಲೇಮಿನಲ್ಲಿರುವ ಜನರು ಈ ಶಬ್ದವನ್ನು ಕೇಳಿದಾಗ ಏನು ನಡೆಯುತ್ತಿದೆಯೆಂದು ನೋಡಲು ಅವರು ಗುಂಪಾಗಿ ಕೂಡಿಬಂದರು. ವಿಶ್ವಾಸಿಗಳು ದೇವರು ಮಾಡಿದ ಮಹತ್ತುಗಳ ಬಗ್ಗೆ ಘೋಷಿಸುತ್ತಿರುವುದನ್ನು ಅವರು ಕೇಳಿಸಿಕೊಂಡರು. ಅವರು ಬೆರಗಾದರು ಏಕೆಂದರೆ ಅವರು ತಮ್ಮ ಸ್ವಂತ ಭಾಷೆಗಳಲ್ಲಿ ಈ ವಿಷಯಗಳನ್ನು ಕೇಳಿಸಿಕೊಳ್ಳುತ್ತಿದ್ದರು.

ಅಲ್ಲಿದ್ದ ಜನರು “ಶಿಷ್ಯರು ಕುಡಿದು ಮತ್ತರಾಗಿದ್ದಾರೆ” ಎಂದು ಹೇಳಿದರು. ಆದರೆ ಪೇತ್ರನು ಎದ್ದು ನಿಂತು ಅವರಿಗೆ ಹೇಳಿದ್ದೇನಂದರೆ, “ನನ್ನ ಮಾತನ್ನು ಕೇಳಿರಿ! ಈ ಜನರು ಕುಡಿದು ಮತ್ತರಾಗಿಲ್ಲ! ಬದಲಿಗೆ, ಪ್ರವಾದಿಯಾದ ಯೋವೇಲನು ಏನಾಗುವುದೆಂದು ಹೇಳಿದ್ದನ್ನೋ ಆ ಸಂಗತಿಯನ್ನು ನೀವು ನೋಡುತ್ತಿರುವಿರಿ. ಅದೇನೆದರೆ: ದೇವರು, "ಕೊನೆಯ ದಿನಗಳಲ್ಲಿ, ನಾನು ನನ್ನ ಆತ್ಮವನ್ನು ಸುರಿಸುವೆನು' ಎಂದು ಹೇಳಿದ್ದನು"

"ಇಸ್ರಾಯೇಲ್ ಜನರೇ, ಯೇಸು ತಾನು ಯಾರೆಂದು ತೋರಿಸುವುದಕ್ಕಾಗಿ ಅನೇಕ ಅದ್ಭುತ ಕಾರ್ಯಗಳನ್ನು ಮಾಡಿದ್ದಂಥ ವ್ಯಕ್ತಿಯಾಗಿದ್ದನು. ಆತನು ದೇವರ ಶಕ್ತಿಯಿಂದ ಅನೇಕ ಅತಿಶಯವಾದ ಕಾರ್ಯಗಳನ್ನು ಮಾಡಿದನು. ನೀವು ಇದನ್ನು ಬಲ್ಲಿರಿ ಏಕೆಂದರೆ ಈ ಕಾರ್ಯಗಳನ್ನು ನೀವು ನೋಡಿದರೂ ನೀವು ಆತನನ್ನು ಶಿಲುಬೆಗೆ ಹಾಕಿಸಿದ್ದೀರಿ!"

"ಯೇಸು ಸತ್ತನು, ಆದರೆ ದೇವರು ಆತನನ್ನು ಸತ್ತವರೊಳಗಿಂದ ಎಬ್ಬಿಸಿದನು. ‘ನಿನ್ನ ಪವಿತ್ರನನ್ನು ಕೊಳೆಯಲು ಬಿಡಲಾರೆ’ ಎಂದು ಪ್ರವಾದಿಯು ಬರೆದಿರುವಂಥದ್ದು ನೆರವೇರುವಂತೆ ಇದಾಯಿತು. ದೇವರು ಯೇಸುವನ್ನು ಜೀವಂತವಾಗಿ ಎಬ್ಬಿಸಿದ್ದನೆಂಬುದಕ್ಕೆ ನಾವು ಸಾಕ್ಷಿಗಳಾಗಿದ್ದೇವೆ."

"ತಂದೆಯಾದ ದೇವರು ಯೇಸುವನ್ನು ತನ್ನ ಬಲಗಡೆಯಲ್ಲಿ ಕುಳಿತುಕೊಳ್ಳುವಂತೆ ಮಾಡುವುದರ ಮೂಲಕ ಈಗ ಆತನನ್ನು ಸನ್ಮಾನಿಸಿದ್ದಾನೆ. ಮತ್ತು ಯೇಸು ತಾನು ಕಳುಹಿಸುವೆನೆಂದು ವಾಗ್ದಾನ ಮಾಡಿದಂತೆಯೇ ಆತನು ನಮಗೆ ಪವಿತ್ರಾತ್ಮನನ್ನು ಕಳುಹಿಸಿಕೊಟ್ಟಿದ್ದಾನೆ. ಈಗ ನೀವು ನೋಡುತ್ತಿರುವ ಮತ್ತು ಕೇಳುತ್ತಿರುವ ಸಂಗತಿಗಳನ್ನು ಮಾಡುತ್ತಿರುವುದು ಪವಿತ್ರಾತ್ಮನೇ."

"ನೀವು ಯೇಸುವೆಂಬ ಈ ಮನುಷ್ಯನನ್ನು ಶಿಲುಬೆಗೆ ಹಾಕಿದ್ದೀರಿ. ಆದರೆ ದೇವರು ಯೇಸುವನ್ನು ಸಕಲಕ್ಕೆ ಕರ್ತನನ್ನಾಗಿಯೂ ಮತ್ತು ಮೆಸ್ಸೀಯನನ್ನಾಗಿಯೂ ಮಾಡಿದ್ದಾನೆಂದು ನಿಸ್ಸಂದೇಹವಾಗಿ ತಿಳಿದಿರಲಿ!" ಎಂದು ಹೇಳಿದನು.

ಪೇತ್ರನ ಮಾತನ್ನು ಕೇಳುತ್ತಿದ್ದ ಜನರು ಅವನು ಹೇಳಿದ ವಿಷಯಗಳಿಂದ ತೀವ್ರವಾಗಿ ಪ್ರಚೋದಿಸಲ್ಪಟ್ಟರು. ಆದ್ದರಿಂದ ಅವರು ಪೇತ್ರನನ್ನು ಮತ್ತು ಶಿಷ್ಯರನ್ನು, "ಸಹೋದರರೇ, ನಾವು ಏನು ಮಾಡಬೇಕು?" ಎಂದು ಕೇಳಿದರು.

ಪೇತ್ರನು ಅವರಿಗೆ, "ನಿಮ್ಮಲ್ಲಿ ಪ್ರತಿಯೊಬ್ಬನು ನಿಮ್ಮ ಪಾಪಗಳಿಗಾಗಿ ಪಶ್ಚಾತ್ತಾಪಪಡಬೇಕು, ಆಗ ದೇವರು ನಿಮ್ಮನ್ನು ಕ್ಷಮಿಸುವನು. ಮತ್ತು ಯೇಸು ಕ್ರಿಸ್ತನ ಹೆಸರಿನಲ್ಲಿ ದೀಕ್ಷಾಸ್ನಾನ ಮಾಡಿಸಿಕೊಳ್ಳಬೇಕು. ಆಗ ಆತನು ನಿಮಗೆ ಪವಿತ್ರಾತ್ಮನನ್ನು ದಾನವಾಗಿ ಕೊಡುವನು" ಎಂದು ಉತ್ತರಿಸಿದನು.

ಪೇತ್ರನು ಹೇಳಿದ ವಿಷಯವನ್ನು ಸುಮಾರು 3,000 ಜನರು ನಂಬಿದ್ದರು ಮತ್ತು ಯೇಸುವಿನ ಶಿಷ್ಯರಾದರು. ಅವರು ದೀಕ್ಷಾಸ್ನಾನ ಮಾಡಿಸಿಕೊಂಡು ಯೆರೂಸಲೇಮಿನಲ್ಲಿರುವ ಸಭೆಯ ಅಂಗವಾದರು.

ಅಪೊಸ್ತಲರು ಅವರಿಗೆ ಬೋಧಿಸುವುದನ್ನು ವಿಶ್ವಾಸಿಗಳು ನಿರಂತರವಾಗಿ ಕೇಳುತ್ತಿದ್ದರು. ಅವರು ಅನೇಕಸಾರಿ ಒಟ್ಟಿಗೆ ಸೇರಿಬರುತ್ತಿದ್ದರು, ಒಟ್ಟಿಗೆ ಊಟಮಾಡುತ್ತಿದ್ದರು ಮತ್ತು ಅವರು ಅನೇಕಸಾರಿ ಪರಸ್ಪರ ಒಬ್ಬರಿಗೊಬ್ಬರು ಪ್ರಾರ್ಥಿಸುತ್ತಿದ್ದರು. ಅವರು ಒಟ್ಟಿಗೆ ದೇವರನ್ನು ಸ್ತುತಿಸುತ್ತಿದ್ದರು ಮತ್ತು ಅವರು ತಮ್ಮಗಿದ್ದೆದ್ದಲ್ಲವನ್ನೂ ಪರಸ್ಪರ ಹಂಚಿಕೊಳ್ಳುತ್ತಿದ್ದರು. ಪಟ್ಟಣದಲ್ಲಿದ್ದ ಎಲ್ಲರೂ ಅವರ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ಪ್ರತಿದಿನ, ಹೆಚ್ಚೆಚ್ಚು ಜನರು ವಿಶ್ವಾಸಿಗಳಾಗುತ್ತಿದ್ದರು.