unfoldingWord 32 - ಯೇಸು ದೆವ್ವ ಹಿಡಿದಿದ್ದ ಮನುಷ್ಯನನ್ನು ಮತ್ತು ರೋಗಿಯಾದ ಸ್ತ್ರೀಯನ್ನು ಸ್ವಸ್ಥಪಡಿಸಿದನು
Raamwerk: Matthew 8:28-34; 9:20-22; Mark 5; Luke 8:26-48
Skripnommer: 1232
Taal: Kannada
Gehoor: General
Genre: Bible Stories & Teac
Doel: Evangelism; Teaching
Bybelaanhaling: Paraphrase
Status: Approved
Skrips is basiese riglyne vir vertaling en opname in ander tale. Hulle moet so nodig aangepas word dat hulle verstaanbaar en relevant is vir elke verskillende kultuur en taal. Sommige terme en konsepte wat gebruik word, het moontlik meer verduideliking nodig of selfs heeltemal vervang of weggelaat word.
Skripteks
ಯೇಸು ಮತ್ತು ಆತನ ಶಿಷ್ಯರು ಗೆರಸೇನರ ಜನರು ವಾಸಿಸುತ್ತಿದ್ದ ಸೀಮೆಗೆ ತಮ್ಮ ದೋಣಿಯಲ್ಲಿ ಹೋದರು. ಅವರು ದಡಕ್ಕೆ ತಲುಪಿ, ತಮ್ಮ ದೋಣಿಯಿಂದ ಇಳಿದರು.
ಅಲ್ಲಿ ದೆವ್ವ ಹಿಡಿದಿದ್ದ ಒಬ್ಬ ಮನುಷ್ಯನಿದ್ದನು.
ಅವನನ್ನು ಹತೋಟಿಗೆ ತರುವುದಕ್ಕೆ ಯಾರಿಂದಲೂ ಆಗುತ್ತಿರಲಿಲ್ಲ ಏಕೆಂದರೆ ಈ ಮನುಷ್ಯನು ಅಷ್ಟು ಬಲಿಷ್ಠನಾಗಿದ್ದನು. ಕೆಲವೊಮ್ಮೆ ಜನರು ಅವನ ಕೈಕಾಲುಗಳನ್ನು ಸರಪಳಿಗಳಿಂದ ಕಟ್ಟಿದ್ದರು, ಆದರೆ ಅವನು ಅವುಗಳನ್ನೂ ಒಡೆದು ಹಾಕುತ್ತಿದ್ದನು.
ಆ ಪ್ರದೇಶದಲ್ಲಿರುವ ಸಮಾಧಿಗಳ ಮದ್ಯೆ ಒಬ್ಬ ಮನುಷ್ಯ ಜೀವಿಸುತ್ತಿದ್ದನು. ಆತನು ಹಗಲಿರುಳು ಅರಚಾಡುತ್ತಿದ್ದನು. ಅವನು ಬಟ್ಟೆಯನ್ನು ಧರಿಸುತ್ತಿರಲಿಲ್ಲ ಮತ್ತು ಅವನು ಹರಿತವಾದ ಕಲ್ಲುಗಳಿಂದ ತನ್ನನ್ನು ತಾನೇ ಕತ್ತರಿಸಿಕೊಳ್ಳುತ್ತಿದ್ದನು.
ಈ ಮನುಷ್ಯನು ಯೇಸುವಿನ ಬಳಿಗೆ ಓಡಿಹೋಗಿ ಆತನ ಮುಂದೆ ಮೊಣಕಾಲೂರಿದನು. ಆಗ ಯೇಸು ಆ ಮನುಷ್ಯನೊಳಗಿದ್ದ ದೆವ್ವಕ್ಕೆ, "ಈ ಮನುಷ್ಯನನ್ನು ಬಿಟ್ಟು ಹೊರಟು ಹೋಗು" ಎಂದು ಹೇಳಿದನು.
ದೆವ್ವವು ಮಹಾಶಬ್ದದಿಂದ, "ಯೇಸುವೇ, ಮಹೋನ್ನತನಾದ ದೇವರ ಮಗನೇ, ನನ್ನ ಗೊಡವೆ ನಿನಗೇಕೆ? ದಯವಿಟ್ಟು ನನ್ನನ್ನು ಹಿಂಸಿಸಬೇಡ!" ಎಂದು ಅಬ್ಬರಿಸಿತು. ಆಗ ಯೇಸು ದೆವ್ವಕ್ಕೆ "ನಿನ್ನ ಹೆಸರೇನು?" ಎಂದು ಕೇಳಿದನು. ಅದು, "ನನ್ನ ಹೆಸರು ದಂಡು; ಯಾಕೆಂದರೆ ನಾವು ಬಹು ಮಂದಿ ಇದ್ದೇವೆ" ಎಂದು ಹೇಳಿತು. (ಒಂದು "ಲೀಜನ್" ಅಥವಾ “ದಂಡು” ಅಂದರೆ ರೋಮನ್ ಸೈನ್ಯದಲ್ಲಿರುವ ಸಾವಿರಾರು ಸೈನಿಕರುಳ್ಳ ಒಂದು ಗುಂಪು.)
ದೆವ್ವಗಳು ಯೇಸುವಿಗೆ, "ದಯವಿಟ್ಟು ನಮ್ಮನ್ನು ಈ ಸೀಮೆಯಿಂದ ಹೊರಡಿಸಬೇಡ” ಎಂದು ಆತನನ್ನು ಬೇಡಿಕೊಂಡವು. ಸಮೀಪದ ಗುಡ್ಡದಲ್ಲಿ ಹಂದಿಗಳ ದೊಡ್ಡ ಹಿಂಡು ಮೇಯುತ್ತಿತ್ತು. ಆ ದೆವ್ವಗಳು, “ಆ ಹಂದಿಗಳೊಳಗೆ ಸೇರಿಕೊಳ್ಳುವುದಕ್ಕೆ ನಮ್ಮನ್ನು ಕಳುಹಿಸಿಕೊಡು!” ಎಂದು ಆತನನ್ನು ಬೇಡಿಕೊಂಡವು. ಯೇಸು, "ಸರಿ, ಅವುಗಳೊಳಗೆ ಹೋಗಿರಿ" ಅಂದನು.
ಆದ್ದರಿಂದ ದೆವ್ವಗಳು ಮನುಷ್ಯನಿಂದ ಹೊರಬಂದು ಹಂದಿಗಳೊಳಗೆ ಹೊಕ್ಕವು. ಆ ಹಂದಿಗಳು ಬೆಟ್ಟದ ಕಡಿದಾದ ಬದಿಯಿಂದ ಓಡಿಹೋಗಿ ಸರೋವರದೊಳಗೆ ಬಿದ್ದು ಮುಳುಗಿಹೋದವು. ಆ ಹಿಂಡಿನಲ್ಲಿ ಸುಮಾರು 2,000 ಹಂದಿಗಳಿದ್ದವು.
ಆ ಹಂದಿಗಳನ್ನು ಮೇಯಿಸುತ್ತಿದ್ದ ಜನರು ಅಲ್ಲಿದ್ದರು. ನಡೆದ ಸಂಗತಿಯನ್ನು ಅವರು ನೋಡಿದಾಗ ಅವರು ಊರುಗಳಿಗೆ ಓಡಿಹೋಗಿ, ಯೇಸು ಮಾಡಿದ ಸಂಗತಿಯನ್ನು ಅಲ್ಲಿರುವ ಎಲ್ಲರಿಗೂ ಅವರು ತಿಳಿಸಿದರು. ಆ ಊರಿನಿಂದ ಜನರು ಬಂದು ದೆವ್ವಗಳಿಂದ ಪೀಡಿತನಾಗಿದ್ದ ಮನುಷ್ಯನನ್ನು ನೋಡಿದರು. ಅವನು ಬಟ್ಟೆ ಧರಿಸಿಕೊಂಡು ಶಾಂತನಾಗಿ ಕುಳಿತುಕೊಂಡಿದ್ದನು ಮತ್ತು ಸಾಮಾನ್ಯ ಮನುಷ್ಯನಂತೆ ವರ್ತಿಸುತ್ತಿದ್ದನು.
ಜನರು ಬಹಳ ಭಯಭೀತರಾಗಿ, ತಮ್ಮ ಸೀಮೆಯನ್ನು ಬಿಟ್ಟು ಹೋಗಬೇಕೆಂದು ಯೇಸುವನ್ನು ಬೇಡಿಕೊಂಡರು. ಆದ್ದರಿಂದ ಯೇಸು ದೋಣಿಯನ್ನು ಹತ್ತಿದನು. ದೆವ್ವಗಳಿಂದ ಪೀಡಿತನಾಗಿದ್ದ ಮನುಷ್ಯನು ಯೇಸುವಿನೊಂದಿಗೆ ತಾನು ಬರುವೆನೆಂದು ಬೇಡಿಕೊಂಡನು.
ಆದರೆ ಯೇಸು ಅವನಿಗೆ, "ಇಲ್ಲ, ನೀನು ಮನೆಗೆ ಹೋಗಿ ದೇವರು ನಿನ್ನಲ್ಲಿ ಕರುಣೆಯಿಟ್ಟು ನಿನಗೆ ಏನೇನು ಮಾಡಿದ್ದಾನೋ ಅದನ್ನು ನೀನು ಹೇಳಬೇಕೆಂದು ನಾನು ಬಯಸುತ್ತೇನೆ" ಎಂದು ಹೇಳಿದನು.
ಅದರಂತೆಯೇ ಅವನು ಹೊರಟುಹೋಗಿ ಯೇಸು ತನಗೆ ಮಾಡಿದ ಉಪಕಾರವನ್ನು ಎಲ್ಲರಿಗೂ ಹೇಳಿದನು. ಅವನ ಕಥೆಯನ್ನು ಕೇಳಿಸಿಕೊಂಡ ಪ್ರತಿಯೊಬ್ಬರು ಆಶ್ಚರ್ಯಪಟ್ಟರು.
ಯೇಸು ಸರೋವರದ ಈಚೇದಡಕ್ಕೆ ಹಿಂದಿರುಗಿ ಬಂದನು. ಆತನು ಅಲ್ಲಿಗೆ ಬಂದ ನಂತರ, ಜನರ ದೊಡ್ಡ ಗುಂಪು ಆತನ ಸುತ್ತಲೂ ಮುತ್ತಿಕೊಂಡು ಆತನನ್ನು ನೂಕಾಡುತ್ತಿದ್ದರು. ಆ ಗುಂಪಿನಲ್ಲಿ ಹನ್ನೆರಡು ವರ್ಷಗಳ ಕಾಲ ರಕ್ತಸ್ರಾವದಿಂದ ಬಳಲುತ್ತಿದ್ದ ಒಬ್ಬ ಸ್ತ್ರೀ ಇದ್ದಳು. ಆಕೆಯು ತನ್ನನ್ನು ಸ್ವಸ್ಥಪಡಿಸುವಂತೆ ತನ್ನ ಹಣವನ್ನೆಲ್ಲಾ ವೈದ್ಯರಿಗೆ ವ್ಯಯಮಾಡಿದ್ದಳು, ಆದರೂ ಅವಳ ರೋಗವು ಹೆಚ್ಚುತ್ತಾ ಬಂದಿತ್ತೇ ಹೊರತು ಸ್ವಲ್ಪವೂ ಗುಣಮುಖವಾಗುತ್ತಿರಲಿಲ್ಲ
ಯೇಸು ಅನೇಕ ಮಂದಿ ರೋಗಿಗಳನ್ನು ಗುಣಪಡಿಸಿದ್ದಾನೆ ಎಂದು ಆಕೆಯು ಕೇಳಿ, "ನಾನು ಯೇಸುವಿನ ಉಡುಪನ್ನು ಮುಟ್ಟಿದರೆ ನಾನು ಕೂಡ ನಿಶ್ಚಯವಾಗಿ ಸ್ವಸ್ಥಳಾಗುವೆನು" ಎಂದು ಆಲೋಚಿಸಿಕೊಂಡಳು. ಆಕೆಯು ಯೇಸುವಿನ ಹಿಂದಿನಿಂದ ಬಂದು ಆತನ ಉಡುಪನ್ನು ಮುಟ್ಟಿದಳು. ಅವಳು ಅದನ್ನು ಮುಟ್ಟಿದ ಕೂಡಲೇ, ರಕ್ತಸ್ರಾವವು ನಿಂತುಹೋಯಿತು!
ತಕ್ಷಣವೇ, ಯೇಸು ತನ್ನಿಂದ ಶಕ್ತಿಯು ಹೊರಹೊಮ್ಮಿತ್ತೆಂದು ತಿಳಿದುಕೊಂಡನು. ಆದ್ದರಿಂದ ಆತನು ಸುತ್ತಲೂ ತಿರುಗಿನೋಡಿ, "ನನ್ನನ್ನು ಮುಟ್ಟಿದವರಾರು?" ಎಂದು ಕೇಳಿದನು. ಶಿಷ್ಯರು, "ನಿನ್ನ ಸುತ್ತಲೂ ಬಹಳ ಜನರು ಮುತ್ತಿಕೊಂಡು ನೂಕುತ್ತಿದ್ದಾರೆ. ಆದರೂ ‘ನನ್ನನ್ನು ಮುಟ್ಟಿದವರು ಯಾರು’ ಎಂದು ಕೇಳುತ್ತೀಯಲ್ಲಾ?" ಎಂದು ಪ್ರಶ್ನಿಸಿದರು.
ಆ ಸ್ತ್ರೀಯು ಭಯದಿಂದ ನಡುಗುತ್ತಾ ಯೇಸುವಿನ ಮುಂದೆ ಅಡ್ಡಬಿದ್ದಳು. ಅಗ ಆಕೆಯು ತಾನು ಮಾಡಿದ್ದನ್ನು ಮತ್ತು ತನಗೆ ಸ್ವಸ್ಥವಾಗಿರುವುದನ್ನು ಆತನಿಗೆ ತಿಳಿಸಿದಳು. ಯೇಸು ಆಕೆಗೆ, "ನಿನ್ನ ನಂಬಿಕೆಯೇ ನಿನ್ನನ್ನು ಸ್ವಸ್ಥಮಾಡಿತು; ಸಮಾಧಾನದಿಂದ ಹೋಗು" ಎಂದು ಹೇಳಿದನು.