unfoldingWord 26 - ಯೇಸು ತನ್ನ ಸೇವೆಯನ್ನು ಪ್ರಾರಂಭಿಸಿದನು
Raamwerk: Matthew 4:12-25; Mark 1-3; Luke 4
Skripnommer: 1226
Taal: Kannada
Gehoor: General
Genre: Bible Stories & Teac
Doel: Evangelism; Teaching
Bybelaanhaling: Paraphrase
Status: Approved
Skrips is basiese riglyne vir vertaling en opname in ander tale. Hulle moet so nodig aangepas word dat hulle verstaanbaar en relevant is vir elke verskillende kultuur en taal. Sommige terme en konsepte wat gebruik word, het moontlik meer verduideliking nodig of selfs heeltemal vervang of weggelaat word.
Skripteks
ಯೇಸು ಸೈತಾನನ ಶೋಧನೆಗಳನ್ನು ನಿರಾಕರಿಸಿದ ನಂತರ , ಆತನು ಗಲಿಲಾಯದ ಸೀಮೆಗೆ ಹಿಂದಿರುಗಿದನು. ಆತನು ಅಲ್ಲಿಯೇ ವಾಸಿಸುತ್ತಿದ್ದನು. ಪವಿತ್ರಾತ್ಮನು ಆತನಿಗೆ ಹೆಚ್ಚು ಶಕ್ತಿಯನ್ನು ಕೊಡುತ್ತಿದ್ದನು, ಮತ್ತು ಯೇಸು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಹೋಗಿ ಜನರಿಗೆ ಬೋಧಿಸುತ್ತಿದ್ದನು. ಪ್ರತಿಯೊಬ್ಬರೂ ಆತನ ಬಗ್ಗೆ ಒಳ್ಳೆಯದನ್ನು ಹೇಳಿದರು.
ಯೇಸು ನಜರೇತ್ ಎಂಬ ಊರಿಗೆ ಹೋದನು. ಆತನು ಚಿಕ್ಕವನಾಗಿದ್ದಾಗ ಆತನು ವಾಸಿಸುತ್ತಿದ್ದ ಹಳ್ಳಿಯು ಇದಾಗಿತ್ತು. ಸಬ್ಬತ್ ದಿನದಲ್ಲಿ ಆತನು ಆರಾಧನೆಯ ಸ್ಥಳಕ್ಕೆ ಹೋದನು. ಮುಖಂಡರು ಪ್ರವಾದಿಯಾದ ಯೆಶಾಯನ ಸಂದೇಶಗಳಿರುವ ಒಂದು ಸುರುಳಿಯನ್ನು ಆತನಿಗೆ ಕೊಟ್ಟರು. ಆತನು ಅದನ್ನು ಓದಬೇಕೆಂದು ಅವರು ಬಯಸಿದ್ದರು. ಆದ್ದರಿಂದ ಯೇಸು ಸುರುಳಿಯನ್ನು ತೆರೆದು ಅದರ ಒಂದು ಭಾಗವನ್ನು ಜನರಿಗೆ ಓದಿಹೇಳಿದನು.
ಯೇಸು, "ನಾನು ಬಡವರಿಗೆ ಶುಭವಾರ್ತೆಯನ್ನು ಸಾರುವಂತೆ ದೇವರು ನನಗೆ ತನ್ನ ಆತ್ಮವನ್ನು ದಯಪಾಲಿಸಿದ್ದಾನೆ, ಸೆರೆಯಲ್ಲಿರುವವರನ್ನು ಬಿಡಿಸುವುದಕ್ಕೂ, ಕುರುಡರು ಮತ್ತೆ ನೋಡುವಂತೆ ಮಾಡುವುದಕ್ಕೂ, ಮತ್ತು ಇತರರಿಂದ ಹಿಂಸಿಸಲ್ಪಟ್ಟವರನ್ನು ಬಿಡಿಸುವುದಕ್ಕೂ ನನ್ನನ್ನು ಕಳುಹಿಸಿದ್ದಾನೆ. ಇದುವೇ ಕರ್ತನು ನಮಗೆ ಕರುಣೆ ತೋರಿ ನಮಗೆ ಸಹಾಯ ಮಾಡುವ ಸಮಯವಾಗಿದೆ." ಎಂಬ ಮಾತುಗಳನ್ನು ಓದಿದನು
ಓದಿದ ನಂತರ ಯೇಸು ಕುಳಿತುಕೊಂಡನು. ಎಲ್ಲರೂ ಆತನನ್ನು ಲಕ್ಷ್ಯವಿಟ್ಟು ನೋಡುತ್ತಿದ್ದರು. ಆತನು ಆಗತಾನೇ ಓದಿದ್ದಂಥ ವಾಕ್ಯಭಾಗವು ಮೆಸ್ಸೀಯನ ಕುರಿತಾಗಿರುವಂಥದ್ದು ಎಂದು ಅವರಿಗೆ ತಿಳಿದಿತ್ತು. ಯೇಸು, "ನಾನು ಈಗತಾನೇ ನಿಮಗೆ ಓದಿಹೇಳಿದ ವಿಷಯಗಳು, ಈಗಲೇ ನೆರೆವೇರುತ್ತಿವೆ " ಎಂದು ಹೇಳಿದನು. ಜನರೆಲ್ಲರು ಆಶ್ಚರ್ಯಚಕಿತರಾಗಿ . "ಇವನು ಯೋಸೇಫನ ಮಗನಲ್ಲವೇ?" ಎಂದು ಅವರು ಹೇಳಿದರು.
ಆಗ ಯೇಸು, "ಒಬ್ಬ ಪ್ರವಾದಿಯು ಬೆಳೆದುಬಂದ ಊರಿನಲ್ಲಿ ಜನರು ಅವನನ್ನು ಎಂದಿಗೂ ಅಂಗೀಕರಿಸುವುದಿಲ್ಲ ಎನ್ನುವುದು ಸತ್ಯ. ಪ್ರವಾದಿಯಾದ ಎಲೀಯನ ಕಾಲದಲ್ಲಿ, ಇಸ್ರಾಯೇಲಿನಲ್ಲಿ ಅನೇಕ ವಿಧವೆಯರು ಇದ್ದರು. ಆದರೆ ಮೂರುವರೆ ವರ್ಷಗಳು ಮಳೆ ಬಾರದಿರುವಾಗ, ದೇವರು ಇಸ್ರಾಯೇಲಿನ ವಿಧವೆಗೆ ಸಹಾಯಮಾಡಲು ಎಲೀಯನನ್ನು ಕಳುಹಿಸಲಿಲ್ಲ ಬದಲಿಗೆ ಬೇರೆ ದೇಶದಲ್ಲಿರುವ ವಿಧವೆಗೆ ಸಹಾಯಮಾಡಲು ದೇವರು ಎಲೀಯನನ್ನು ಕಳುಹಿಸಿದನು" ಎಂದು ಹೇಳಿದನು.
ಯೇಸು ಮುಂದುವರಿಸಿ ಹೇಳಿದ್ದೇನಂದರೆ, "ಪ್ರವಾದಿಯಾದ ಎಲೀಷನ ಕಾಲದಲ್ಲಿ ಇಸ್ರಾಯೇಲಿನಲ್ಲಿ ಚರ್ಮರೋಗವಿದ್ದ ಅನೇಕ ಜನರಿದ್ದರು. ಆದರೆ ಎಲೀಷನು ಅವರಲ್ಲಿ ಯಾರನ್ನೂ ಗುಣಪಡಿಸಲಿಲ್ಲ, ಅವನು ಇಸ್ರಾಯೇಲ್ಯರ ಶತ್ರುಗಳ ಸೇನಾಧಿಪತಿಯಾದ ನಾಮಾನನ ಚರ್ಮರೋಗವನ್ನು ಮಾತ್ರ ಗುಣಪಡಿಸಿದನು." ಆದರೆ ಯೇಸುವಿನಿಂದ ಕೇಳಿಸಿಕೊಳ್ಳುತ್ತಿದ್ದ ಜನರು ಯೆಹೂದ್ಯರಾಗಿದ್ದರು. ಆತನು ಹೀಗೆ ಹೇಳುವುದನ್ನು ಅವರು ಕೇಳಿಸಿಕೊಂಡಾಗ, ಅವರು ಆತನ ಮೇಲೆ ಸಿಟ್ಟುಗೊಂಡರು.
ನಜರೇತಿನ ಜನರು ಯೇಸುವನ್ನು ಹಿಡಿದುಕೊಂಡು ಆತನನ್ನು ಆರಾಧನೆಯ ಸ್ಥಳದಿಂದ ಎಳೆದುಕೊಂಡು ಹೋದರು. ಆತನನ್ನು ಕೊಲ್ಲುವ ಸಲುವಾಗಿ ಆತನನ್ನು ದೊಬ್ಬಿಬಿಡಲು ಗುಡ್ಡದ ಅಂಚಿಗೆ ಕರೆತಂದರು. ಆದರೆ ಯೇಸು ಸಮೂಹದ ಮಧ್ಯದಲ್ಲಿ ಹಾದು ನಜರೇತ್ ಊರನ್ನು ಬಿಟ್ಟು ಹೊರಟುಹೋದನು.
ಅನಂತರ ಯೇಸು ಗಲಿಲಾಯದ ಸೀಮೆಯಾದ್ಯಂತ ಹಾದುಹೋದನು ಮತ್ತು ದೊಡ್ಡ ಜನಸಮೂಹವು ಆತನ ಬಳಿಗೆ ಬಂದಿತು. ಅವರು ಅಸ್ವಸ್ಥರು ಅಥವಾ ಅಂಗವಿಕಲರು ಆಗಿದ್ದ ಅನೇಕ ಜನರನ್ನು ಕರೆತಂದರು. ಇವರಲ್ಲಿ ಅನೇಕರಿಗೆ ನೋಡಲು, ನಡೆಯಲು, ಕೇಳಲು, ಅಥವಾ ಮಾತನಾಡಲು ಆಗುತ್ತಿರಲಿಲ್ಲ, ಮತ್ತು ಯೇಸು ಅವರನ್ನು ವಾಸಿಮಾಡಿದನು.
ದೆವ್ವ ಹಿಡಿದಿದ್ದ ಅನೇಕರನ್ನು ಸಹ ಯೇಸುವಿನ ಬಳಿಗೆ ಕರೆತಂದರು. ಅವರನ್ನು ಬಿಟ್ಟು ಹೊರಗೆ ಬರಬೇಕೆಂದು ಯೇಸು ದೆವ್ವಗಳಿಗೆ ಆಜ್ಞಾಪಿಸಿದನು, ಆದ್ದರಿಂದ ದೆವ್ವಗಳು ಹೊರಬಂದವು. ಅನೇಕ ಸಾರಿ ದೆವ್ವಗಳು, "ನೀನು ದೇವರ ಮಗ" ಎಂದು ಕೂಗುತ್ತಿದ್ದವು. ಜನಸಮೂಹವು ಅತ್ಯಾಶ್ಚರ್ಯಪಟ್ಟು ದೇವರನ್ನು ಸ್ತುತಿಸಿದರು.
ಅನಂತರ ಯೇಸು ಹನ್ನೆರಡು ಮಂದಿಯನ್ನು ಆರಿಸಿಕೊಂಡನು, ಅವನು ತನ್ನ ಅಪೊಸ್ತಲರು ಎಂದು ಕರೆದನು. ಅಪೊಸ್ತಲರು ಯೇಸುವಿನೊಂದಿಗೆ ಪ್ರಯಾಣ ಮಾಡಿದರು ಮತ್ತು ಆತನಿಂದ ಕಲಿತುಕೊಂಡರು.